ಕೊರೋನ ಲಸಿಕೆಗೆ ನಿರ್ದಿಷ್ಟ ಗಡುವನ್ನು ವಿಧಿಸಲು ಸಾಧ್ಯವಿಲ್ಲ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

Update: 2020-07-13 15:23 GMT

ಹೊಸದಿಲ್ಲಿ, ಜು.13: ದೇಶದಲ್ಲಿ ಕೊರೋನ ವೈರಸ್ ಸೋಂಕು ಸಮುದಾಯದ ಮಟ್ಟಕ್ಕೆ ಹಬ್ಬಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಅಲ್ಲದೆ ಕೊರೋನ ವೈರಸ್ ವಿರುದ್ಧದ ಲಸಿಕೆಗೆ ನಿರ್ದಿಷ್ಟ ಗಡುವನ್ನು ವಿಧಿಸಲು ಸಾಧ್ಯವಿಲ್ಲ ಎಂದವರು ಇದೇ ಸಂದರ್ಭ ಹೇಳಿದ್ದಾರೆ.

ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾರತ ಅತ್ಯುತ್ತಮ ನಿರ್ವಹಣೆ ತೋರಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಭಾರತ ಮತ್ತು ಅಮೆರಿಕದಲ್ಲಿ ಕೊರೋನ ಸೊಂಕಿತರ ಪ್ರಮಾಣವನ್ನು ತೋರಿಸುವ ನಕ್ಷೆ ಹಾಗೂ ದಕ್ಷಿಣ ಕೊರಿಯಾ ಮತ್ತು ನ್ಯೂಝಿಲ್ಯಾಂಡ್ ನಲ್ಲಿ ಸೋಂಕಿನ ಪ್ರಮಾಣವನ್ನು ತೋರಿಸುವ ನಕ್ಷೆಯನ್ನು ಹೋಲಿಕೆ ಮಾಡಿದ್ದು, ‘ಭಾರತ ಕೊರೋನ ವಿರುದ್ಧದ ಹೋರಾಟದಲ್ಲಿ ಉತ್ತಮ ಸ್ಥಾನದಲ್ಲಿದೆಯೇ ?’ ಎಂದು ಪ್ರಶ್ನಿಸಿದ್ದಾರೆ.

ಈ ಮಧ್ಯೆ, ಕೊರೋನ ಸೋಂಕು ಚಿಕಿತ್ಸೆಗೆ ಆಯಾ ರಾಜ್ಯಗಳು ತಮ್ಮದೇ ಶುಲ್ಕವನ್ನು ನಿರ್ಧರಿಸುವವರೆಗೆ, ಕೇಂದ್ರ ಸರಕಾರದ ಆರೋಗ್ಯ ಯೋಜನೆಯ ವ್ಯಾಪ್ತಿಗೆ ಬರುವ ಖಾಸಗಿ ಆಸ್ಪತ್ರೆಗಳು ದಿಲ್ಲಿ ಸರಕಾರ ನಿಗದಿಪಡಿಸಿರುವ ಶುಲ್ಕವನ್ನು ವಿಧಿಸಲು ನಿರ್ಧರಿಸಿವೆ.

ಕೊರೋನ ಸೋಂಕಿನ ಸೌಮ್ಯ ಮತ್ತು ಮಧ್ಯಮ ಲಕ್ಷಣವಿರುವ ರೋಗಿಗಳ ಚಿಕಿತ್ಸೆಗೆ ಬಳಸುವ ವೈರಲ್ ನಿರೋಧಕ ಔಷಧ ಫ್ಯಬಿಫ್ಲು ಲಸಿಕೆಯ ಬೆಲೆಯಲ್ಲಿ 27% ಕಡಿತ ಮಾಡಿರುವುದಾಗಿ ಗ್ಲೆನ್ಮಾರ್ಕ್ ಔಷಧ ಸಂಸ್ಥೆ ಹೇಳಿದ್ದು ಈಗ 75 ರೂ.ಗಳಿಗೆ ಮಾತ್ರೆ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News