ಮಣಿಪಾಲ ಆರೋಗ್ಯ ಕಾರ್ಡ್ ಒಡಂಬಡಿಕೆ ಹಸ್ತಾಂತರ

Update: 2020-07-13 15:50 GMT

ಉಡುಪಿ, ಜು.13: ಆಧುನಿಕ ಜೀವನ ಶೈಲಿಯಿಂದಾಗಿ ವೈದ್ಯಕೀಯ ಕ್ಷೇತ್ರ ಇಂದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದ ಇಡೀ ಆರೋಗ್ಯ ವ್ಯವಸ್ಥೆಯ ಮೇಲೆ ವಿಶೇಷ ಒತ್ತಡಗಳು ಬೀಳುತ್ತಿವೆ. ಇದನ್ನು ನಿಭಾಯಿಸಲು ಆರೋಗ್ಯ ವಿಮೆ/ಆರೋಗ್ಯ ಕಾರ್ಡ್‌ಗಳು ಹೆಚ್ಚಿನ ನೆರವು ನೀಡುತ್ತವೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಜಗನ್ನಾಥ ಸಭಾಭವನದಲ್ಲಿ ನಡೆದ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಣಿಪಾಲ ಆರೋಗ್ಯ ಕಾರ್ಡ್ ಒಡಂಬಡಿಕೆ ಹಸ್ತಾಂತರ ಕಾರ್ಯಕ್ರಮದಲ್ಲಿ ಸೊಸೈಟಿಯ ಮುಖ್ಯಸ್ಥರಿಗೆ ಒಡಂಬಡಿಕೆಯನ್ನು ಹಸ್ತಾಂತರಿಸಿ ಅವರು ಮಾತನಾಡುತಿದ್ದರು.

ಆರೋಗ್ಯ ಕ್ಷೇತ್ರದಲ್ಲಿ ಸಾಮಾನ್ಯವಾದ ವಿಮೆ ಸೌಲಭ್ಯ ಇಲ್ಲದ ಕಾಲದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯಗಳನ್ನು 20 ವರ್ಷಗಳ ಹಿಂದೆ ಆರಂಭಿಸಲಾಗಿತ್ತು. ಅದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು, ಕಳೆದ ವರ್ಷ 3 ಲಕ್ಷಕ್ಕೂ ಅಧಿಕ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಇದೀಗ ಹೊಸದಾಗಿ ಬಡಗುಬೆಟ್ಟು ಸೊಸೈಟಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದರು.

ಬಡಗಬೆಟ್ಟು ಕ್ರೆಡಿಟ್‌ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೋವಿಡ್-19 ಸಂದರ್ಭ ಸೊಸೈಟಿಯಿಂದ 15 ಲಕ್ಷಕ್ಕೂ ಮಿಕ್ಕಿ ಸಹಾಯ ನೀಡಿದ್ದೇವೆ. ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ನೀಡುವ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಈಗಾಗಲೇ 611 ಕಾರ್ಡ್ ವಿತರಣೆ ಮಾಡಿದ್ದು, 1700ಕ್ಕೂ ಅಧಿಕ ಮಂದಿ ಈ ಕಾರ್ಡ್‌ನ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದರು.

ಮಣಿಪಾಲ ಕೆಎಂಸಿಯ ಮಾರ್ಕೆಟಿಂಗ್ ಹೆಡ್ ಮೋಹನ್ ಶೆಟ್ಟಿ ಆರೋಗ್ಯ ಕಾರ್ಡ್‌ನ ಬಗ್ಗೆ ಮಾಹಿತಿ ನೀಡಿದರು. ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಮಿತಿ ಸಂಚಾಲಕ ಪಿ. ಪುರುಷೋತ್ತಮ ಶೆಟ್ಟಿ, ಸೊಸೈಟಿಯ ಉಪಾಧ್ಯಕ್ಷ ಎಲ್. ಉಮಾನಾಥ್ ಕೋಟ್ಯಾನ್, ಮಣಿಪಾಲ ಆರೋಗ್ಯ ಕಾರ್ಡ್‌ನ ಮಾರ್ಕೆಟಿಂಗ್ ಹೆಡ್ ಸಚಿನ್ ಕಾರಂತ್ ಉಪಸ್ಥಿತರಿದ್ದರು.

ಶಾಖಾ ವ್ಯವಸ್ಥಾಪಕ ನವೀನ್ ಕೆ.ಕಾರ್ಯಕ್ರಮ ನಿರೂಪಿಸಿದರೆ, ಸೊಸೈಟಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಎಸ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News