ದೇವಾಲಯದಲ್ಲಿ ಸಿಸಿಟಿವಿ ಕಡ್ಡಾಯ: ದ.ಕ. ಜಿಲ್ಲಾಧಿಕಾರಿ

Update: 2020-07-13 16:11 GMT

ಮಂಗಳೂರು, ಜು.13: ದೇವಾಲಯಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾಗಳನ್ನು ಒಳಗೊಂಡಿರಬೇಕು. ಅವುಗಳು ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ನಿತ್ಯ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೊಮವಾರ ನಡೆದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿನ ಆಭರಣಗಳನ್ನು ಸಂರಕ್ಷಣೆ ಹಾಗೂ ಮೌಲ್ಯಮಾಪನ ಮಾಡುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಅನಾದಿ ಕಾಲದ ವಿಗ್ರಹ, ಚಿನ್ನ, ಬೆಳ್ಳಿ ಮತ್ತು ಇನ್ನಿತರ ಅಮೂಲ್ಯ ವಸ್ತುಗಳ ಕಳ್ಳ ಸಾಗಣೆ ತಡೆಯುವ ನಿಟ್ಟಿನಲ್ಲಿ ಎಲ್ಲ ದೇವಾಲಯಗಳಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ಅವುಗಳು ರೆಕಾರ್ಡಿಂಗ್ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುವುದನ್ನು ಆಡಳಿತ ವರ್ಗ ಪರೀಕ್ಷಿಸಬೇಕು. ಜೊತೆಗೆ ಬಾಕಿ ಉಳಿದಿರುವ ಎಲ್ಲ ದೇವಾಲಯಗಳ ಮೌಲ್ಯಮಾಪನ ಪ್ರಕ್ರಿಯೆ ಬೇಗ ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಕೊರೋನ ವ್ಯಾಪಕವಾಗುತ್ತಿರುವುದರಿಂದ ಸರಕಾರದ ಮಾರ್ಗಸೂಚಿಯಂತೆ ಹೆಚ್ಚು ಜನಸಂದಣಿ ನಿರ್ಬಂಧಿಸಲಾಗಿದೆ. ಮುಂಬರುವ ದಿನಗಳಲ್ಲಿ ನಾಗರ ಪಂಚಮಿ, ಚೌತಿ ಸೇರಿದಂತೆ ಇನ್ನಿತರ ಹಬ್ಬಗಳನ್ನು ಮನೆಯಲ್ಲಿ ಆಚರಿಸಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾತನಾಡಿ, ಮುಖ್ಯವಾಗಿ ‘ಎ’ ಮತ್ತು ‘ಬಿ’ ವರ್ಗಕ್ಕೆ ಸೇರಿದ ದೇವಾಲಯಗಳಲ್ಲಿ ಪೊಲೀಸ್ ಇಲಾಖೆಯಿಂದ ತರಬೇತಿ ಪಡೆದ ನುರಿತ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಭದ್ರತೆಯ ದೃಷ್ಟಿಯಿಂದ ಎಲ್ಲ ದೇವಾಲಯಗಳ ಆಡಳಿತ ವರ್ಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ದೇವಸ್ಥಾನಗಳಲ್ಲಿ ಒಂದೇ ಬಾಗಿಲಲ್ಲಿ ಪ್ರವೇಶಕ್ಕೆ ಅನುಮತಿ ನೀಡಬೇಕು. ಅಲಾರ್ಮ್ (ಗಂಟೆ) ಅಳವಡಿಸಿ ಅವುಗಳ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಬೇಕು. ಈ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶಗಿರಿ ಮಾತನಾಡಿ, ದೇವಾಲಯಗಳಲ್ಲಿ ಕನಿಷ್ಠ ಪ್ರತೀ ವರ್ಷಕ್ಕೊಮ್ಮೆ ಹುಂಡಿ ಖಾಲಿ ಮಾಡುತ್ತಾ ಇರಬೇಕು. ಸ್ಥಳೀಯ ಪೊಲೀಸ್ ಇಲಾಖೆಯ ಸಹಾಯ ಪಡೆದು ಸಿಸಿಟಿವಿಯನ್ನು ಪರಿಶೀಲಿಸಬೇಕು. ಭದ್ರತಾ ಸಿಬ್ಬಂದಿಗೆ ಪೊಲೀಸ್ ಇಲಾಖೆಯ ಮುಖಾಂತರ ತರಬೇತಿ ನೀಡಬೇಕು. ದೇವಾಲಯದ ಆಭರಣಗಳನ್ನು ಸಂರಕ್ಷಿಸಿಡಲು ಸೂಕ್ತ ಖಜಾನೆ ವ್ಯವಸ್ಥೆ ಇರಬೇಕು. ಎಲ್ಲ ದೇವಾಲಯಗಳ ಗೋಪುರ ಸೇರಿದಂತೆ ಎಲ್ಲ ಕಡೆ ಬೆಳಕು ಇರಬೇಕು ಎಂದು ದೇವಾಲಯದ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ದೇವಾಲಯಗಳ ಆಡಳಿತಾಧಿಕಾರಿಗಳು ಉಪಸ್ಥಿತರಿದ್ಧರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News