ಲಾಕ್‌ಡೌನ್‌ಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳಲು ಸರ್ವ ಪಕ್ಷ ಸಭೆ ಕರೆಯಬೇಕು: ಐವನ್ ಡಿಸೋಜಾ

Update: 2020-07-13 16:30 GMT

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗಿದೆ. ಲಾಕ್‌ಡೌನ್‌ಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ದ.ಕ.ಜಿಲ್ಲೆಗೆ ಸಂಬಂಧಿಸಿ ಸರ್ವ ಪಕ್ಷ ಸಭೆ ಕರೆಯಬೇಕು ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜಾ ಆಗ್ರಹಿಸಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಸಂಸದರು, ಸಚಿವರು ಹಾಗೂ ಏಳು ಮಂದಿ ಶಾಸಕರು ಬಿಜೆಪಿಯವರಾಗಿರುವುದರಿಂದ ಬಿಜೆಪಿಯ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಈ ಸಭೆ ಅಗತ್ಯವಾಗಿದೆ ಎಂದು ಐವನ್ ಡಿಸೋಜಾ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

2ನೆ ಬಾರಿ ಲಾಕ್‌ಡೌನ್ ನಿರ್ಧಾರಕ್ಕೆ ಮುಂದಾಗಿರುವುದರಿಂದ ಈವರೆಗೆ ಕೈಗೊಂಡಿರುವ ನಿರ್ಧಾರಗಳಲ್ಲಿ ವಿಫಲವಾಗಿರುವುದಕ್ಕೆ ನಿದರ್ಶನವಾಗಿದ್ದು, ಇದನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಒಪ್ಪಬೇಕು. ಹಾಗಾಗಿ ಮತ್ತೆ ಅದೇತಪ್ಪು ಮಾಡುವ ಬದಲು ಸರ್ವ ಪಕ್ಷ ತಕ್ಷಣ ಕರೆದು ಸೂಕ್ತ ನಿರ್ಧಾರ ಕೈಗೊಳ್ಳಬೇಕು. 2ನೆ ಬಾರಿ ಲಾಕ್‌ಡೌನ್ ಯಶಸ್ವಿಯಾಗಬೇಕಿದ್ದರೆ ಜನರ ಸಹಕಾರ ಅಗತ್ಯವಾಗಿದೆ. ಕೊರೋನ ನಿರ್ಮೂಲನೆಗೆ ಸಂಬಂಧಿಸಿ ಆರಂಭದ ಸಭೆಯಲ್ಲಿ ನಾನು ಹಾಗೂ ಶಾಸಕ ಯು.ಟಿ.ಖಾದರ್ ಅದಾಗಲೇ ಜಿಲ್ಲೆಯಲ್ಲಿ 500 ಬೆಡ್‌ಗಳನ್ನು ಮೀಸಲಿಡುವ ಜತೆಗೆ ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆಯುವಂತೆ ಒತ್ತಾಯಿಸಿದ್ದರೂ ಈ ಬಗ್ಗೆ ಸೂಕ್ತ ಕ್ರಮವಾಗಿಲ್ಲ. ಬೋಳಾರದಲ್ಲಿ ಶವಸಂಸ್ಕಾರಕ್ಕೆ ಅವಕಾಶ ನೀಡಲಾಗಿದ್ದರೂ ಅಲ್ಲಿದ್ದ ಒಂದೂ ಇಲೆಕ್ಟ್ರಿಕ್ ‌ಚಿತಾಗಾರ ಕೆಟ್ಟಿದ್ದು ಅದನ್ನು ರಿಪೇರಿ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಕೊರೋನ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು  ಆರೋಪಿಸಿದರು.

ಲಾಕ್‌ಡೌನ್‌ನಿಂದಲೇ ಕೊರೋನ ನಿಯಂತ್ರಣ ಎನ್ನುವುದು ಮೂರ್ಖರ ತೀರ್ಮಾನ. ಇದರಿಂದ ಕೊರೋನ ಸೋಂಕಿನ ಸಂಖ್ಯೆ ಹೆಚ್ಚಳವಾಗುವುದನ್ನು ಹಾಗೂ ಸಾವಿನ ಸಂಖ್ಯೆಯನ್ನು ಮುಂದೂಡಬಹುದು ಅಷ್ಟೆ. ಹಾಗಾಗಿ ಧಾರ್ಮಿಕ ಮುಖಂಡರು, ಕಾರ್ಮಿಕ ನಾಯಕರು, ಜನ ನಾಯಕರನ್ನು ಒಳಗೊಂಡ ಸರ್ವಪಕ್ಷದ ಸಭೆಯ ಮೂಲಕ ಒಮ್ಮತದ ನಿರ್ಧಾರಕ್ಕೆ ಬರಬೇಕಾಗಿದೆ. ಲಾಕ್‌ಡೌನ್ ಸಂದರ್ಭ ಯಾವ ರೀತಿಯಲ್ಲಿ ಜನರಿಗೆ ಹೇಗೆ ನೆರವಾಗುವುದು ಎಂಬ ಬಗ್ಗೆ ಸ್ಪಷ್ಟವಾದ ಚಿತ್ರಣ ನೀಡಬೇಕು. ಇಲ್ಲವಾದಲ್ಲಿ ಮತ್ತೆ ವಿಧಿಸಲಾಗುವ ಲಾಕ್‌ಡೌನ್ ಕೂಡಾ ವಿಫಲವಾಗಲಿದೆ. ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ರ್ಯಾಂಡಮ್ ತಪಾಸಣೆ (ಸಾಮೂಹಿಕ ತಪಾಸಣೆ) ಹೆಚ್ಚಿಸಬೇಕು. ತಪಾಸಣೆಯ ಲ್ಯಾಬ್ ಸಂಖ್ಯೆ ಹೆಚ್ಚಿಸಬೇಕು. ಬಡವರ ತಪಾಸಣೆ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ಐವನ್ ಡಿಸೋಜಾ ಆಗ್ರಹಿಸಿದರು.

ಜಿಲ್ಲೆಯಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆರಂಭಿಸಿರುವ ಕೊರೋನ ಆರೋಗ್ಯ ಕಿಟ್‌ಗಳ ಖರೀದಿಯಲ್ಲಿ ಆಗಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ಲೆಕ್ಕಕೊಡಿ ಅಭಿಯಾನವನ್ನು ಬೆಂಬಲಿಸುವುದಲ್ಲದೆ, ಜಿಲ್ಲೆಯಲ್ಲೂ ಈ ಅಭಿಯಾನ ನಡೆಸಿ ಚಳವಳಿ ಆರಂಭಿಸಲಾಗುವುದು. ಕೊರೋನ ನಿಯಂತ್ರಣ ಬಂದ ಮೇಲೆ ಬೀದಿಗಿಳಿದು ಈ ಬಗ್ಗೆ ಹೋರಾಟ ನಡೆಸಲಾಗುವುದು ಎಂದು ಐವನ್ ಡಿಸೋಜಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News