ಕುಂದಾಪುರದ ಎಎಸ್ಸೈ ಸಹಿತ ಮೂವರು ಪೊಲೀಸರಿಗೆ ಕೊರೋನ ಪಾಸಿಟಿವ್

Update: 2020-07-13 16:37 GMT

ಕುಂದಾಪುರ, ಜು.13: ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರ(ಎಎಸ್ಪಿ) ಕಚೇರಿಯ ಸಿಬ್ಬಂದಿ ಹಾಗೂ ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ಸಂಬಂಧಿಸಿದ ಹೈವೇ ಪ್ಯಾಟ್ರೋಲ್ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಚಾಲಕ ಸಿಬ್ಬಂದಿಗೆ ಕೊರೋನ ಪಾಸಿಟಿವ್ ಬಂದಿರುವುದು ಇಂದು ದೃಢಪಟ್ಟಿದೆ.

ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಎಎಸ್ಪಿಕಚೇರಿ ಸಿಬ್ಬಂದಿ ಜು.2ರಿಂದ ಹೋಂ ಕ್ವಾರೆಂಟೈನ್‌ನಲ್ಲಿದ್ದು, ಕೊರೋನ ಪರೀಕ್ಷೆಗೆ ಒಳಪಟ್ಟಿದ್ದರು. ಇದೀಗ ಅವರ ವರದಿ ಪಾಸಿಟಿವ್ ಬಂದಿರುವುದರಿಂದ ಕುಂದಾಪುರ ಎಲ್ಐಸಿ ರಸ್ತೆಯಲ್ಲಿರುವ ಎಎಸ್ಪಿ ಕಚೇರಿಯನ್ನು ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಬಂದ್ ಮಾಡಿ, ಸ್ಯಾನಿಟೈಸ್ ಮಾಡಲಾಗಿದೆ.

ಎಎಸ್ಪಿ ಸಹಿತ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಒಟ್ಟು ಆರು ಸಿಬ್ಬಂದಿ ಹೋಮ್ ಕ್ವಾರಂಟೇನ್‌ಗೆ ಒಳಗಾಗಿದ್ದಾರೆ. ಈ ಕಚೇರಿಯು ಸದ್ಯಕ್ಕೆ ಕುಂದಾಪುರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದೆ. ಕುಂದಾಪುರ ಉಪ ವಿಭಾಗದ ಹೊಣೆಯನ್ನು ಉಡುಪಿ ಡಿವೈಎಸ್ಪಿ ಅವರಿಗೆ ನೀಡಲಾಗಿದೆ.

ಸಂಚಾರ ಠಾಣೆಯ ಪೊಲೀಸ್ ಸಿಬ್ಬಂದಿಗೆ ಕೆಲವು ದಿನಗಳ ಹಿಂದೆ ಕೊರೋನ ಪಾಸಿಟಿವ್ ಬಂದ ಕಾರಣ, ಹೈವೇ ಪ್ಯಾಟ್ರೋಲ್ ಕರ್ತವ್ಯದಲ್ಲಿದ್ದ ಎಎಸ್‌ಐ ಮತ್ತು ಅವರ ಕಾರು ಚಾಲಕ(ಜಿಲ್ಲಾ ಸಶಸ್ತ್ರ ಪಡೆಯ ಸಿಬಂದಿ) ಇಬ್ಬರೂ ಜುಲೈ 5ರಿಂದ ಹೋಮ್ ಕ್ವಾರಂಟೈನ್‌ನಲ್ಲಿದ್ದರು. ಆದುದರಿಂದ ಸಂಚಾರ ಠಾಣೆಯು ಎಂದಿನಂತೆ ಅಲ್ಲೇ ಕಾರ್ಯನಿರ್ವಹಿಸಲಿದೆ. ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News