​ಕುಂದಾಪುರ: ಮಧ್ಯಾಹ್ನ ಬಳಿಕ ವ್ಯವಹಾರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Update: 2020-07-13 16:43 GMT

ಕುಂದಾಪುರ, ಜು.13: ಕೊರೋನ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ವರ್ತಕರು ಇಂದಿನಿಂದ ಮಧ್ಯಾಹ್ನ ನಂತರ ನಡೆಸಿರುವ ಅಂಗಡಿಮುಂಗ್ಗಟ್ಟುಗಳ ಸ್ವಯಂ ಪ್ರೇರಿತ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೊರೋನ ಸಾಮುದಾಯಿಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯ ಸುಮಾರು 150ಕ್ಕಿಂತ ಅಧಿಕ ಸಮಾನ ಮನಸ್ಕ ವ್ಯಾಪಾರಸ್ಥರು ಸಭೆ ಸೇರಿ ಮೆಡಿಕಲ್, ಹಾಲು, ಹೋಟೆಲ್ ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಜು.13ರಿಂದ ಜು.31ವರೆಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆದು, ಬಳಿಕ ಸ್ವಯಂ ಪ್ರೆೀರಿತ ಬಂದ್ ಮಾಡಲು ನಿರ್ಧರಿಸಿದ್ದರು.

ಅದರಂತೆ ಇಂದು ನಗರದ ಶೇ.90ರಷ್ಟು ವರ್ತಕರು ಮಧ್ಯಾಹ್ನ 2 ಗಂಟೆಯಿಂದಲೇ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿರುವುದು ಕಂಡುಬಂತು. ತಮ್ಮ ಇಂದಿನ ವ್ಯವಹಾರವನ್ನು ಸ್ವಯಂ ಪ್ರೇರಿತವಾಗಿ ಅರ್ಧ ದಿನಕ್ಕೆ ಸ್ಥಗಿತಗೊಳಿಸಿ ದರು. ಈ ನಿರ್ಧಾರವನ್ನು ಈ ಮೊದಲೇ ಘೋಷಣೆ ಮಾಡಿರುವುದರಿಂದ ಗ್ರಾಹಕರು ಬೆಳಗ್ಗೆಯಿಂದಲೇ ತಮಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಅಂಗಡಿ ಗಳಿಂದ ಖರೀದಿಸಿದರು.

‘ಪುರಸಭೆ ವ್ಯಾಪ್ತಿಯಲ್ಲಿ 400ಕ್ಕೂ ಅಧಿಕ ಅಂಗಡಿಗಳಿದ್ದು, ಇವರೆಲ್ಲ ನಮ್ಮ ನಿರ್ಧಾರಕ್ಕೆ ಬೆಂಬಲವಾಗಿ ಮಧ್ಯಾಹ್ನಕ್ಕೆ ವ್ಯವಹಾರವನ್ನು ಸ್ಥಗಿತಗೊಳಿಸಿದ್ದಾರೆ. ಕೆಲವರು ನಾಳೆಯಿಂದ ಲಾಕ್‌ಡೌನ್ ಆಗಬಹುದೆಂಬ ಭೀತಿಯಲ್ಲಿ ಹಾಗೂ ಇನ್ನು ಕೆಲವರು ನಮ್ಮ ನಿರ್ಧಾರವನ್ನು ಮೊದಲೇ ಘೋಷಿಸಿರುವುದರಿಂದ ಅಗತ್ಯ ವಸ್ತುಗಳನ್ನು ಬೆಳಗ್ಗೆಯೇ ಬಂದು ಖರೀದಿಸಿದರು. ನಾವು ಬಂದ್ ಮಾಡುವಂತೆ ಯಾರಿಗೂ ಒತ್ತಡ ಹಾಕಿಲ್ಲ. ಎಲ್ಲ ವ್ಯಾಪಾರಸ್ಥರು ಸ್ವ ಇಚ್ಛೆಯಿಂದ ಬಂದ್ ಮಾಡಿದ್ದಾರೆ’ ಎಂದು ವರ್ತಕ ರಾಧಾಕೃಷ್ಣ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News