ಶಿಕ್ಷಕಿಯಿಂದ ಅಂಬೇಡ್ಕರ್‌ಗೆ ಅವಮಾನ ಆರೋಪ: ಕ್ಷಮೆಯಾಚನೆಗೆ ದಲಿತ ಸಂಘಟನೆಗಳ ಪಟ್ಟು

Update: 2020-07-13 17:23 GMT

ಉಡುಪಿ, ಜು.13: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಇದರ ವತಿಯಿಂದ ಏರ್ಪಡಿಸಲಾದ ಶಿಕ್ಷಕರ ರಾಜ್ಯಮಟ್ಟದ ‘ಮಾತನಾಡಿ ಬಹುಮಾನ ಗೆಲ್ಲಿ’ ಸ್ಪರ್ಧೆಯಲ್ಲಿ ಭಾಗವಹಿಸಿರುವ ಸಂತೆಕಟ್ಟೆಯ ಶಿಕ್ಷಕಿಯೊಬ್ಬರ ವಿಡಿಯೋ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಂವಿಧಾನದ ಕುರಿತ ತಮ್ಮ ಭಾಷಣದಲ್ಲಿ ಅಂಬೇಡ್ಕರ್ ಬಗ್ಗೆ ಎಲ್ಲೂ ಉಲ್ಲೇಖ ಮಾಡದಿರುವ ಆ ಶಿಕ್ಷಕಿಯ ವಿರುದ್ಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಸಂವಿಧಾನ ಕುರಿತ ಸಂತೆಕಟ್ಟೆಯ ಸರಕಾರಿ ಶಾಲೆಯ ಶಿಕ್ಷಕಿಯ ಯೂ ಟ್ಯೂಬ್ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿತ್ತು. ಇದರಲ್ಲಿ ಸಂವಿಧಾನ ಬರೆದ ಅಂಬೇಡ್ಕರ್ ಅವರ ಹೆಸರು ಎಲ್ಲೂ ಉಲ್ಲೇಖ ಆಗದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದವು.

ಈ ಸಂಬಂಧ ಶಿಕ್ಷಕಿಯನ್ನು ಸಂಪರ್ಕಿಸಿದ ದಲಿತ ಮುಖಂಡರು, ಕೂಡಲೇ ಕ್ಷಮೆಯಾಚಿಸುವಂತೆ ಅವರನ್ನು ಒತ್ತಾಯಿಸಿದರು. ಅದರಂತೆ ಶಿಕ್ಷಕಿ ಆಡಿಯೋ ಮೂಲಕ ತಮ್ಮ ಭಾಷಣದ ಬಗ್ಗೆ ವಿಷಾಧವನ್ನು ವ್ಯಕ್ತಪಡಿಸಿದರು. ಆದರೆ ಅವರು ಕ್ಷಮೆಯಾಚಿಸುವಂತೆ ದಲಿತ ಸಂಘಟನೆಗಳು ಪಟ್ಟು ಹಿಡಿದಿದ್ದವು. ಮತ್ತೆ ಕ್ಷಮೆಯಾಚನೆ ಮಾಡುವುದಾಗಿ ಹೇಳಿದ್ದ ಶಿಕ್ಷಕಿ ಮತ್ತೆ ಸಂಪರ್ಕಕಕ್ಕೆ ಸಿಕ್ಕಿರಲಿಲ್ಲ ಎಂದು ದಲಿತ ಮುಖಂಡ ಜಯನ್ ಮಲ್ಪೆ ತಿಳಿಸಿದ್ದಾರೆ.

‘ಅಂಬೇಡ್ಕರ್‌ಗೆ ಅವಮಾನ ಮಾಡಿರುವ ಶಿಕ್ಷಕಿ, ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ದ ಜಿಲ್ಲಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ದೂರು ನೀಡಲಾಗುವುದು. ಅಲ್ಲದೆ ಈ ವಿಡಿಯೋ ಪ್ರಸಾರ ಮಾಡಿರುವ ಯೂಟ್ಯೂಬ್ ವಿರುದ್ಧವೂ ಸೈಬರ್ ಕ್ರೈಮ್‌ಗೆ ದೂರು ನೀಡಲಾಗುವುದು ಎಂದು ಜಯನ್ ಮಲ್ಪೆ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News