ತಾಂತ್ರಿಕ ತೊಂದರೆಯಿಂದ ಸಮಯದ್ರ ಮಧ್ಯೆ ಸಿಲುಕಿದ ದೋಣಿ: ಉಳ್ಳಾಲದ ಮೂವರ ರಕ್ಷಣೆ

Update: 2020-07-13 17:36 GMT

ಉಳ್ಳಾಲ,ಜು. ಉಳ್ಳಾಲದಿಂದ ಮೀನುಗಾರಿಕೆಗೆಂದು ತೆರಳಿದವರು ದೋಣಿಯಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ಪರಿಣಾಮ ಸಮುದ್ರ ಮಧ್ಯೆ ಸಿಲುಕಿದ್ದರು. ಅವರನ್ನು ಬಂಗ್ರ ಮಂಜೇಶ್ವರದ ಮೀನುಗಾರರು ರಕ್ಷಿಸಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

 ಉಳ್ಳಾಲದಿಂದ ಮೀನುಗಾರಿಕೆಗೆ ತೆರಳಿದ ದೋಣಿಯಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾಗಿ ಸುಮಾರು ಹದಿನಾರು ಗಂಟೆ ಸಮುದ್ರ ಮಧ್ಯೆ ಬಾಕಿಯಾಗಿತ್ತು ಎನ್ನಲಾಗಿದೆ. ಈ ಮಾಹಿತಿ ಮೇರೆಗೆ  ಮೂವರನ್ನು  ಸೋಮವಾರ ಬೆಳಗ್ಗೆ ಬಂಗ್ರ ಮಂಜೇಶ್ವರದ ಮೀನುಗಾರರು ತೆರಳಿ ರಕ್ಷಣೆಗೈದಿದ್ದಾರೆ.

 ಉಳ್ಳಾಲದ ಆಸೀಫ್ ಎಂಬವರ ಮಾಲಕತ್ವದಲ್ಲಿರುವ ಅಯನ್ ಹೆಸರಿನ ದೋಣಿಯಲ್ಲಿ ಉಳ್ಳಾಲ ಸಮುದ್ರ ತೀರದಿಂದ ರವಿವಾರ ಬೆಳಗ್ಗೆ 6.00ಗಂಟೆಗೆ ಮೂವರು ಮೀನುಗಾರಿಕೆಗೆ ತೆರಳಿದ್ದರು. ಈ ನಡುವೆ ಸಮುದ್ರ ಮಧ್ಯೆ ದೋಣಿಯ ಎಂಜಿನ್ ಕೆಟ್ಟು ಹೋಗಿತ್ತು ಎನ್ನಲಾಗಿದೆ.

ದೋಣಿಯಲ್ಲಿದ್ದ ತಮಿಳುನಾಡು ರಾಮೇಶ್ವರಂ ನಿವಾಸಿಗಳಾದ ಉಳ್ಳಾಲದಲ್ಲಿ ಮೀನುಗಾರಿಕೆ ಕೆಲಸ ನಿರ್ವಹಿಸುವ ಬಾಲ, ನಾಗರಾಜ ಹಾಗೂ ಸುಕುಮಾರ ಎಂಬವರು ದೋಣಿಯಲ್ಲಿ ಕೊಂಡೊಯ್ದಿದ್ದ  ಆಹಾರ, ನೀರನ್ನು ಸೇವಿಸಿ ರಾತ್ರಿ ಕಳೆದಿದ್ದರು ಎಂದು ತಿಳಿದು ಬಂದಿದೆ.

ಸೋಮವಾರ ಬೆಳಗ್ಗೆ ಬಂಗ್ರ ಮಂಜೇಶ್ವರದ ಕೆಎಂಕೆ ರಶೀದ್ ಎಂಬವರಿಗೆ ಮಾಹಿತಿ ದೊರಕಿತು. ಅವರು ಕಣ್ವತೀರ್ಥ ನಿವಾಸಿ ಧನರಾಜ್ ಹೊಸಬೆಟ್ಟು ಕಡಪ್ಪರ ನಿವಾಸಿಗಳಾದ ಮುಸ್ತಫಾ ಮಂಜೇಶ್ವರ, ಹನೀಫ್ ಬಂಗ್ರ ಮಂಜೇಶ್ವರ, ಮುಹಮ್ಮದ್, ರಝಾಕ್ ಎಂಬವರೊಂದಿಗೆ  ತೆರಳಿ ಸಮುದ್ರ ಮಧ್ಯೆ ಸಿಲುಕಿದವರನ್ನು ರಕ್ಷಿಸಿ ದೋಣಿ ಸಮೇತ ಕರೆದುಕೊಂಡು ಬಂದಿದ್ದಾರೆ.

ಬಂಗ್ರ ಮಂಜೇಶ್ವರ ಸಮುದ್ರ ತೀರಕ್ಕೆ ಆಗಮಿಸಿದ ಮೂವರು ಸುರಕ್ಷಿತವಾಗಿ ಮರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News