ಚೀನಾದಲ್ಲಿ ಭಾರೀ ಪ್ರವಾಹದಿಂದ 141 ಮಂದಿ ಸಾವು

Update: 2020-07-13 18:09 GMT

ಬೀಜಿಂಗ್, ಜು. 13: ಚೀನಾದ ಹಲವಾರು ವಲಯಗಳಲ್ಲಿ ಸಂಭವಿಸಿದ ಭೀಕರ ಪ್ರವಾಹಗಳಲ್ಲಿ 140ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂದು ರಾಜಧಾನಿ ಬೀಜಿಂಗ್ ನಲ್ಲಿ ರವಿವಾರ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 3.8 ಲಕ್ಷ ಜನರು ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾರೆ.

‘‘ಚೀನಾದ 27 ವಲಯಗಳಲ್ಲಿ ಭೀಕರ ಪ್ರವಾಹ ತಲೆದೋರಿದ್ದು, ಜುಲೈ 12ರ ವೇಳೆಗೆ ಸುಮಾರು 3.79 ಕೋಟಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಜಿಯಾಂಗ್ಕ್ಸಿ, ಅನ್ಹುಯಿ, ಹುಬೈ ಮತ್ತು ಹುನಾನ್ ಪ್ರಾಂತಗಳು ಹೆಚ್ಚಿನ ಸಂಕಷ್ಟಕ್ಕೊಳಗಾಗಿವೆ. 141 ಮಂದಿ ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ. ಸುಮಾರು 22.5 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ’’ ಎಂದು ದೇಶದ ಸರಕಾರಿ ಪ್ರವಾಹ ನಿಯಂತ್ರಣ ಮತ್ತು ಬರ ಪರಿಹಾರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಇದಕ್ಕೂ ಮೊದಲು, ಈ ಕಚೇರಿಯು ದೇಶದ ಪ್ರವಾಹ ಎಚ್ಚರಿಕೆ ಮಟ್ಟವನ್ನು ಮೂರರಿಂದ ಎರಡಕ್ಕೆ ಏರಿಸಿತ್ತು. ಇದು ಎರಡನೇ ಗರಿಷ್ಠ ಎಚ್ಚರಿಕೆ ಮಟ್ಟವಾಗಿದೆ.

ಹಲವು ವಾರಗಳಿಂದ ದೇಶಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯಾಂಗ್ಝೆ ಸೇರಿದಂತೆ ಹಲವಾರು ನದಿಗಳು ಉಕ್ಕಿ ಹರಿಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News