ಕೋವಿಡ್‌ನಿಂದ ಮೃತಪಟ್ಟ ರೋಗಿಯ ಶವ ಅಂತ್ಯಸಂಸ್ಕಾರಕ್ಕೆ ವೈದ್ಯ ಸಹಕರಿಸಿದ್ದು ಹೀಗೆ...

Update: 2020-07-14 04:14 GMT

ಹೈದರಾಬಾದ್, ಜು.14: ವೈದ್ಯರೊಬ್ಬರು ಸ್ವತಃ ಟ್ರ್ಯಾಕ್ಟರ್ ಚಲಾಯಿಸಿಕೊಂಡು, ಕೋವಿಡ್-19 ಸೋಂಕಿನಿಂದ ಮೃತಪಟ್ಟ ರೋಗಿಯ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಒಯ್ದು ಮಾನವೀಯತೆ ಮೆರೆದ ಅಪರೂಪದ ಘಟನೆ ವರದಿಯಾಗಿದೆ.

ಪೆದ್ದಪಲ್ಲಿ ಜಿಲ್ಲಾ ವೈದ್ಯಕೀಯ ಸರ್ವೇಕ್ಷಣಾ ಅಧಿಕಾರಿಯಾಗಿರುವ ಡಾ.ಪೆಂಡ್ಯಾಲ ಶ್ರೀರಾಮ್ ಅವರು ಕೋವಿಡ್-19 ರೋಗಿಯೊಬ್ಬ ಮೃತಪಟ್ಟ ವೇಳೆ ಕರ್ತವ್ಯದಲ್ಲಿದ್ದರು. ಆದರೆ ಆಸ್ಪತ್ರೆಯಲ್ಲಿ ಯಾವುದೇ ಆ್ಯಂಬುಲೆನ್ಸ್ ಲಭ್ಯವಿಲ್ಲದ ಕಾರಣ ಮಹಾನಗರ ಪಾಲಿಕೆ ಟ್ರ್ಯಾಕ್ಟರ್‌ನಲ್ಲಿ ಮೃತದೇಹ ಒಯ್ಯಲು ನಿರ್ಧರಿಸಲಾಯಿತು. ಆದರೆ ಟ್ರ್ಯಾಕ್ಟರ್ ಚಾಲಕ ಮೃಯದೇಹ ಒಯ್ಯಲು ನಿರಾಕರಿಸಿದ. ಈ ಹಿನ್ನೆಲೆಯಲ್ಲಿ 45 ವರ್ಷ ವಯಸ್ಸಿನ ಶ್ರೀರಾಮ್ ಸ್ಮಶಾನದವರೆಗೆ ಸ್ವತಃ ತಾವೇ ಟ್ರ್ಯಾಕ್ಟರ್ ಚಲಾಯಿಸಿ ಮೃತದೇಹ ಒಯ್ದರು.

ಕೋವಿಡ್-19ನಿಂದ ಮೃತಪಟ್ಟ ರೋಗಿಯ ಮೃತದೇಹವನ್ನು ಟ್ರ್ಯಾಕ್ಟರ್‌ನಲ್ಲಿ ಸ್ವತಃ ವೈದ್ಯರೇ ಒಯ್ಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದ ಇದುವರೆಗೆ ಎಂಟು ಮಂದಿ ಮೃತಪಟ್ಟಿದ್ದರೂ, ಪೆದ್ದಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಇದು ಮೊದಲ ಸಾವು. ರವಿವಾರ ಬೆಳಗ್ಗೆ 9:30ರ ವೇಳೆಗೆ ರೋಗಿ ಮೃತಪಟ್ಟಿದ್ದ.

ಮೊದಲ ಪ್ರಕರಣವಾದ್ದರಿಂದ ಶಿಷ್ಟಾಚಾರಕ್ಕೆ ಅನುಸಾರವಾಗಿ ಮೃತದೇಹವನ್ನು ಹೇಗೆ ಪ್ಯಾಕ್ ಮಾಡಬೇಕು ಎನ್ನುವುದೂ ಸೇರಿದಂತೆ ಪ್ರಕರಣಗಳವನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಆಸ್ಪತ್ರೆ ಸಿಬ್ಬಂದಿಗೂ ತಿಳಿದಿರಲಿಲ್ಲ. ಆಸ್ಪತ್ರೆಯಲ್ಲಿ ಏಕೈಕ ಮಹಿಳಾ ವೈದ್ಯಾಧಿಕಾರಿ ಹಾಗೂ ನರ್ಸ್‌ಗಳಿದ್ದರು. ದುರಾದೃಷ್ಟವಶಾತ್ ಆಸ್ಪತ್ರೆಯಲ್ಲಿ ಮೃತದೇಹವನ್ನು 4 ಡಿಗ್ರಿ ಸೆಲ್ಷಿಯಸ್‌ಗಿಂತ ಕಡಿಮೆ ಉಷ್ಣತೆಯಲ್ಲಿ ಕೆಲ ಕಾಲ ಶವವನ್ನು ಇಡಬಹುದಾದ ಶವಾಗಾರವೂ ಇಲ್ಲ. ಮೃತದೇಹ ಒಯ್ಯಲು ಆ್ಯಂಬುಲೆನ್ಸ್ ಕೂಡಾ ಇರಲಿಲ್ಲ ಎಂದು ಶ್ರೀರಾಮ್ ವಿವರಿಸಿದರು.

ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದಾಗ ಪಾಲಿಕೆ ಟ್ರ್ಯಾಕ್ಟರ್‌ನಲ್ಲಿ ಒಯ್ಯಲು ಸೂಚಿಸಿದರು. ಆದರೆ ಟ್ರ್ಯಾಕ್ಟರ್ ಚಾಲಕ, ವಾಹನವನ್ನು ಅಲ್ಲೇ ಬಿಟ್ಟು ಓಡಿಹೋದ. ಆಗ ಮೃತದೇಹ ಸಾಗಿಸುವ ಹೊಣೆಯನ್ನು ಸ್ವತಃ ಶ್ರೀರಾಮ್ ವಹಿಸಿಕೊಂಡರು. ತಾವು ಪಿಪಿಇ ಧರಿಸುವ ಜತೆಗೆ ರೋಗಿಯ ಕುಟುಂಬದ ನಾಲ್ವರಿಗೂ ಪಿಪಿಇ ಧರಿಸಲು ಸೂಚಿಸಿ ಅವರ ನೆರವಿನೊಂದಿಗೆ ಟ್ರ್ಯಾಕ್ಟರ್‌ಗೆ ಮೃತದೇಹ ಸಾಗಿಸಿ ಟ್ರ್ಯಾಕ್ಟರ್‌ನಲ್ಲಿ ಸ್ಮಶಾನಕ್ಕೆ ಸಾಗಿಸಿ, ಶಿಷ್ಟಾಚಾರದ ಅನ್ವಯ ಸಂಸ್ಕಾರಕ್ಕೆ ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News