ನೆಟ್‌ವರ್ಕ್ ಬಿಸಿನೆಸ್ ಎಂಬ ಮೋಸದ ಜಾಲ

Update: 2020-07-14 06:06 GMT
ಸಾಂದರ್ಭಿಕ ಚಿತ್ರ

ನೆಟ್ ವರ್ಕ್ ಬ್ಯುಸಿನೆಸ್ ಹೆಸರಿನಲ್ಲಿ ಭಾರೀ ಲಾಭದ ಆಸೆ ತೋರಿಸಿ ಸಾವಿರಾರು ರೂಪಾಯಿ ಹಣ ಪಡೆದು ಜನರನ್ನು ಮೋಸ ಮಾಡುತ್ತಿರುವ ಬೃಹತ್ ಜಾಲಗಳು ರಾಜ್ಯದಲ್ಲಿ ಸಕ್ರಿಯವಾಗಿದ್ದು ಮೋಸಕ್ಕೆ ಒಳಗಾದವರು ಕಾನೂ‌ನಿನ ಮೂಲಕವೂ ನ್ಯಾಯ ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಸಿಕೊಂಡಿದ್ದಾರೆ.

ನೆಟ್ ವರ್ಕ್ ಬ್ಯುಸಿನೆಸ್ ಹೆಸರಿನ ಹಲವು ಕಂಪೆನಿಗಳು ರಾಜ್ಯದಲ್ಲಿ ನಿರುದ್ಯೋಗಿ, ಅನಕ್ಷರಸ್ಥ ಹಾಗೂ ಗ್ರಾಮೀಣ ಭಾಗದ ಮುಗ್ದ ಜನರನ್ನು ವಂಚಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮೋಸ ಹೋದವರ ಬಳಿ ಕಾನೂನಿನ ಮೂಲಕ ನ್ಯಾಯ ಪಡೆಯಲು ಬೇಕಾದ ಯಾವುದೇ ಸಾಕ್ಷಿ, ಆಧಾರ, ದಾಖಲೆ‌ ಪತ್ರಗಳು ಇಲ್ಲದಿರುವ ಕಾರಣ ಪೊಲೀಸ್ ದೂರು ನೀಡಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಾಗಿ ಈ ನಕಲಿ ನೆಟ್ ವರ್ಕ್ ಕಂಪೆನಿಗಳು ಕಾನೂನಿನ ಭಯವೂ ಇಲ್ಲದೆ ರಾಜಾರೋಷವಾಗಿ ಕಾರ್ಯಾಚರಿಸುತ್ತಿದೆ.

ನೆಟ್ ವರ್ಕ್ ಬ್ಯುಸಿನೆಸ್ ಎಂದು ಹೇಳುವ ಕಂಪೆನಿಗಳ ವೆಬ್ ಸೈಟ್ ನಲ್ಲಿ ಕಂಪೆನಿಯ ಮುಖ್ಯ ಕಚೇರಿಯ ವಿಳಾಸ, ಮುಖ್ಯಸ್ಥ, ಅಧಿಕಾರಿಗಳು ಹಾಗೂ ಕಂಪೆನಿ ಹೊಂದಿರುವ ಆಸ್ತಿ, ಕ‍ಂಪೆನಿ ಇಡೀ ವರ್ಷ ನಡೆಸುವ ಕಾರ್ಯಕ್ರಮದ ಪೋಟೊ, ವೀಡಿಯೊ ಸಹಿತ ಎಲ್ಲಾ ವಿವರಗಳು ಇರುತ್ತವೆ. ಕಂಪೆನಿಗೆ ಸರಕಾರದ ಹಾಗೂ ಕಾನೂನಿನ ಮಾನ್ಯತೆ ಅಲ್ಲದೆ ವಿದೇಶದ ಬಹುರಾಷ್ಟ್ರೀಯ ಕಂಪೆನಿಗಳ ಜೊತೆ ಪಾಲುದಾರಿಕೆ, ಅದರ ಮಾನ್ಯತಾ ಪತ್ರ, ಸರಕಾರಕ್ಕೆ ಪಾವತಿಸಿದ ಆದಾಯ ತೆರಿಗೆಯ ವಿವರಗಳನ್ನು ತೋರಿಸಲಾಗುತ್ತದೆ. ಅಲ್ಲದೆ ಕಂಪೆನಿ ವಿಶ್ವಾಸಾರ್ಹ ಎಂದು ತೋರಿಸಲು ಬೇಕಾದ ಎಲ್ಲಾ ಕಡತಗಳೂ ಏಜಂಟರ ಬಳಿ ಇರುತ್ತದೆ. ಇವೆಲ್ಲವನ್ನು ತೋರಿಸಿ ಏಜೆಂಟರು ಜನರ ವಿಶ್ವಾಸ ಗಳಿಸಿ ಕಂಪೆನಿಯ ಸದಸ್ಯರನ್ನಾಗಿ ಮಾಡುತ್ತಾರೆ. ಆದರೆ ಇವೆಲ್ಲವೂ ನಕಲಿ ಆಗಿರುತ್ತದೆ. ಸದಸ್ಯರಾದ ಬಳಿಕ‌ ಲಾಭವೂ ನೀಡದೆ, ಪಾವತಿಸಿದ ಹಣವೂ ವಾಪಸ್ ಕೊಡದೆ ಮೋಸ ಮಾಡಲಾಗುತ್ತಿದೆ ಎಂದು ನೆಟ್ ವರ್ಕ್ ಕಂಪೆನಿಯೊಂದರಿಂದ ಮೋಸ ಹೋದ ಫರಂಗಿಪೇಟೆಯ ಯಾಸರ್ ಎಂಬ ಯುವಕ ಆರೋಪಿಸಿದ್ದಾನೆ.

ಹತ್ತು ಸಾವಿರ ರೂಪಾಯಿ ಪಾವತಿಸಿ ಸದಸ್ಯರಾದರೆ ಪ್ರತೀ ದಿನ 150 ರೂಪಾಯಿಯಂತೆ 200 ದಿನಗಳು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಪಾವತಿಯಾಗುತ್ತದೆ. ಅಲ್ಲದೆ ಕಂಪೆನಿಗೆ ಹೊಸ ಸದಸ್ಯರನ್ನು ಸೇರಿಸಿದರೆ ತಲಾ ಒಬ್ಬ ಸದಸ್ಯನ ಅನುಸಾರ ಬೋನಸ್ ಪಡೆಯಲಿದ್ದೀರಿ. ಕಂಪೆನಿ ನಿಗದಿ ಪಡಿಸಿದಷ್ಟು ಸದಸ್ಯರನ್ನು ಸೇರಿಸಿ ಟಾರ್ಗೆಟ್ ಪೂರೈಸಿದರೆ ಉಚಿತ ಕಾರು, ಮನೆ, ಲೈಫ್ ಇನ್ಶುರೆನ್ಸ್ ಹಾಗೂ ಕುಟುಂಬದ ದೇಶ, ವಿದೇಶ ಪ್ರವಾಸಕ್ಕೆ ಬೇಕಾದ ವಿಮಾನ ಟಿಕೆಟ್, ಖರ್ಚನ್ನು ಕಂಪೆನಿ ಭರಿಸಲಿದೆ ಎಂಬ ಆಸೆಯನ್ನು ನೀಡಲಾಗುತ್ತಿದೆ. ಸೇರಿದ ಬಳಿಕ ಪಾವತಿಸಿದ ಹಣವೂ ಇಲ್ಲ, ಕಂಪೆನಿ ನೀಡಿದ ಆಫರೂ ಇಲ್ಲದೆ ಜನರು ಮೋಸ ಹೋಗುತ್ತಿದ್ದಾರೆ ಎಂದು ಮೋಸ ಹೋದ ಯುವಕರ ಆರೋಪ. 

ಇದೇ ಮಾದರಿಯ ಹಲವು ನೆಟ್ ವರ್ಕ್ ಕಂಪೆನಿಗಳು ರಾಜ್ಯದಲ್ಲಿ ಸಕ್ರಿಯವಾಗಿವೆ. ಹದಿನೈದು ಸಾವಿರ ರೂ. ಪಾವತಿಸಿ ಸದಸ್ಯರಾದರೆ ಗ್ಯಾಸ್ ಸ್ಟೌವ್, ಎಮರ್ಜೆನ್ಸಿ ಲೈಟ್, ಪ್ಲಾಸ್ಟಿಕ್ ಕುರ್ಚಿಗಳು ಅಥವಾ ಟೇಬಲ್ ಹೀಗೆ ಯಾವುದಾರೂ ಒಂದು ಮನೆ ಬಳಕೆಯ ವಸ್ತು ಉಚಿತವಾಗಿ ನೀಡಲಾಗುತ್ತಿದೆ. ಆ ಬಳಿಕ ಹೊಸ ಸದಸ್ಯರನ್ನು ಸೇರಿಸಬೇಕು. ಒಬ್ಬ ಹೊಸ ಸದಸ್ಯನನ್ನು ಸೇರಿಸಿದರೆ ಎರಡು ಸಾವಿರ ರೂ.‌ ನೀಡಲಾಗುತ್ತದೆ ಎನ್ನುತ್ತಾರೆ. ಆದರೆ ನಾವು ಎಷ್ಟೇ ಸದಸ್ಯರನ್ನು ಸೇರಿಸಿದರೂ ಕಂಪೆನಿ ಆರಂಭದಲ್ಲಿ ಹೇಳಿದಷ್ಟು ಹಣ ನೀಡದೆ ಸತಾಯಿಸುತ್ತಾರೆ.‌ ನಾವು ಸೇರಿದ ಸದಸ್ಯರು ನಮ್ಮ ಬೆನ್ನು ಬೀಳುತ್ತಾರೆ. ಕೊನೆಗೆ ಈ ಜಂಜಾಟವೇ ಬೇಡ ಎಂದು ನಾವೇ ಹಿಂದೆ ಸರಿಯುತ್ತೇವೆ ಎಂದು ಯಾಸರ್ ತನ್ನ ಅನುಭವವನ್ನು ಹೇಳುತ್ತಾನೆ.

ನೆಟ್ ವರ್ಕ್ ಬ್ಯುಸಿನೆಸ್ ಸೇರುವ ಮೊದಲು ಕಂಪೆನಿಗಳ ಏಜೆಂಟರು ಜನರನ್ನು ಕರೆದುಕೊಂಡು ಹೋಗಿ ಉಪನ್ಯಾಸ ನೀಡುತ್ತಾರೆ. ಬೆಂಗಳೂರು, ಮಂಗಳೂರು, ಮೈಸೂರು ಸಹಿತ ರಾಜ್ಯದ ವಿವಿಧೆಡೆ ಇರುವ ಸೆಂಟರ್ ಗಳಲ್ಲಿ ಉಪನ್ಯಾಸಗಳು ನಡೆಯುತ್ತವೆ. ಇದನ್ನು ಉಪನ್ಯಾದ ಎನ್ನುವುದಕ್ಕಿಂದ ಬ್ರೈನ್ ವಾಶ್ ಕ್ಲಾಸ್ ಎನ್ನಬಹುದು. ಪ್ರೊಜೆಕ್ಟರ್ ಬಳಸಿ ಬ್ಯುಸಿನೆಸ್ ನ ಲಾಭದ ಬಗ್ಗೆ ಅತೀ ರಂಜಿತವಾಗಿ ವಿವರಿಸುತ್ತಾರೆ. ಉಪನ್ಯಾಸ ಮುಗಿದ ಕೂಡಲೇ ಅವರು ನೀಡುವ ಫಾರಂ ತುಂಬಿಸಬೇಕು. ಬಳಿಕ ವಾರದ ಒಳಗೆ ಹಣ ನೀಡಬೇಕು ಎಂಬ ಷರತ್ತು ನೀಡುತ್ತಾರೆ. ಕ್ಲಾಸ್ ಗೆ ಹೋದವರು ಎಷ್ಟು ಕಷ್ಟವಾದರೂ ಹಣ ನೀಡುವಂತೆ ಬ್ರೈನ್ ವಾಶ್ ಮಾಡಲಾಗುತ್ತದೆ.

ಉಪನ್ಯಾಸದ ಕೊನೆಯಲ್ಲಿ ಕೆಲವರನ್ನು ಸನ್ಮಾನಿಸಲಾಗುತ್ತದೆ. ಮಾಸಿಕ 50 ಸಾವಿರ ರೂ., 1 ಲಕ್ಷ ರೂ., 2 ಲಕ್ಷ ರೂ. 10 ಲಕ್ಷ ರೂ. ಗಳಿಸಿದವರು ಎಂದು ಪ್ರತ್ಯೇಕವಾಗಿ ಸನ್ಮಾನಿಸಲಾಗುತ್ತಿದೆ. ಅಲ್ಲದೆ ಕಾರು ಗೆದ್ದವರು, ಮನೆ ಪಡೆದವರು, ವಿದೇಶ ಪ್ರವಾಸಕ್ಕೆ ಟಿಕೆಟ್ ಪಡೆದವರು, 50 ಲಕ್ಷ ರೂ. ಲೈಫ್ ಇನ್ಶುರೆನ್ಸ್ ಗೆದ್ದವರು ಎಂದು ಸನ್ಮಾನಿಸಿ ಸಿಹಿ‌‌ ಹಂಚಲಾಗುತ್ತಿದೆ. ಇವೆಲ್ಲವನ್ನು ಕಂಡು ನಿರುದ್ಯೋಗ, ಅನಕ್ಷರಸ್ಥ ಯುವಕರು, ಮುಗ್ದ ಜನರು ಹಣ, ಮನೆ, ಕಾರಿನ ಆಸೆಗೆ ಹಣ ಪಾವತಿಸಿ ಮೋಸ ಹೋಗುತ್ತಿದ್ದಾರೆ ಎಂದು ತೊಕ್ಕೋಟು ಕಲ್ಲಾಪು ನಿವಾಸಿ ನಿಯಾಝ್ ಎಂಬವರು ಆರೋಪಿಸಿದ್ದಾರೆ.

ಲಾಕ್ ಡೌನ್, ಕೊರೋನದಿಂದ ಕೆಲಸಗಳನ್ನು ಕಳೆದು ಆರ್ಥಿಕ ಸಂಕಷ್ಟದಲ್ಲಿರುವ ಯುವಕರನ್ನು ಇಂಥಹ ಕಂಪೆನಿಗಳು ಮನೆಯಲ್ಲೇ ಕುಳಿತು ಭಾರೀ ಲಾಭ ಪಡೆಯುವ ಆಸೆ ತೋರಿಸಿ ದುರುಪಯೋಗ ಮಾಡುತ್ತಿವೆ. ಪ್ರತೀಯೊಂದು ಕಂಪೆನಿಯೂ ಒಂದೆರಡು ವರ್ಷ ಕಾರ್ಯಾಚರಿಸಿ ಬಂದ್ ಆಗುತ್ತವೆ. ಮತ್ತೆ ಅದೇ ಕಂಪೆನಿ ಬೇರೆ ಹೆಸರಿನಲ್ಲಿ ಕಾರ್ಯಚರಿಸುತ್ತವೆ. ಇದ್ಯಾವುದರ ಅರಿವಿಲ್ಲದೆ ಯುವಕರು, ವೃದ್ಧರು, ಮಹಿಳೆಯರೆನ್ನದೆ ಗ್ರಾಮೀಣ ಭಾಗದ ಮುಗ್ದ ಜನರು ಹಣ ಆಸೆಗಾಗಿ ಹಣ ಕಳೆದು ಮೋಸ ಹೋಗುತ್ತಿದ್ದಾರೆ.  ಎಂದು ಯಾಸರ್ ಆರೋಪಿಸಿದ್ದಾರೆ.

ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಲ್ಲಿ ಹಣ್ಣು ಹಂಪಲು ಮಾರುತ್ತಿದ್ದ ನನ್ನನ್ನು ಗೆಳೆಯನೊಬ್ಬ ತಲೆ ತಿಂದು ನೆಟ್ ವರ್ಕ್ ಕಂಪೆನಿಯೊಂದರ ಸದಸ್ಯನನ್ನಾಗಿ ಮಾಡಿದ. ಕಂಪೆನಿಯ ಏಜೆಂಟರು ಹೇಳಿದಂತೆ ನನ್ನ ಕೆಲಸವನ್ನು ಬಿಟ್ಟು ಈ ಕ‍ಂಪೆನಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ. ಸದಸ್ಯರಾಗುವವರಿಗೆ 11 ಸಾವಿರ, 22 ಸಾವಿರ, 33 ಸಾವಿರ ರೂಪಾಯಿ ಹೀಗೆ ಲಕ್ಷಾಂತರ ರೂಪಾಯಿಯ ಪ್ಯಾಕೇಜ್ ಗಳು ಇವೆ. ನಾನು 33 ಸಾವಿರ ರೂಪಾಯಿಯ ಪ್ಯಾಕೇಜ್ ತೆಗೆದೆ. ಒಂದೂವರೆ ವರ್ಷಗಳ ಕಾಲ ನಾನು ಆ ಕಂಪೆನಿಯಲ್ಲಿ ದುಡಿದೆ. ಒಟ್ಟು 40 ಸಾವಿರ ರೂಪಾಯಿ ಸಿಕ್ಕಿದೆ. ಅಷ್ಟು ಹಣ ಸಿಗಲು 2 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದೇನೆ. ಕಂಪೆನಿಯ ನಿಯಮದಂತೆ ಹೊಸ ಸದಸ್ಯರನ್ನು ಸೇರಿಸಬೇಕಾದರೆ ನಾವು ಐಶಾರಾಮಿ ಜೀವನ ನಡೆಸುವ ರೀತಿ ಕಾಣಬೇಕು. ನಮ್ಮ ಡ್ರೆಸ್ ಕೋಡ್ ಉತ್ತಮವಾಗಿರಬೇಕು. ದುಬಾರಿ ಬೆಲೆಯ ಮೊಬೈಲ್ ಫೋನ್ ಹಿಡಿದಿರಬೇಕು. ಸದಸ್ಯರನ್ನಾಗಿ ಮಾಡಲು ನಾವು ಪ್ರಯತ್ನಿಸುವ ನಮ್ಮ ಸ್ನೇಹಿತರನ್ನು ಅಥವಾ ಪರಿಚಯಸ್ಥರನ್ನು ಉತ್ತಮ ದರ್ಜೆಯ ಹೊಟೇಲ್ ಗೆ ಕರೆದುಕೊಂಡು ಹೋಗಿ ಚಾ ಕುಡಿಸುತ್ತಾ ಕಂಪೆನಿಯ ಬಗ್ಗೆ ಮಾತನಾಡಬೇಕು. ಮಾರುಕಟ್ಟೆಯಲ್ಲಿ ದುಡಿಯುತ್ತಿದ್ದ ತನ್ನ ಈ ಐಶಾರಾಮಿ ಜೀವನಕ್ಕೆ ಈ ಕಂಪೆನಿಯ ಆದಾಯವೇ ಮೂಲ ಅಂತ ತೋರಿಸುವುದು ಇದರ ಉದ್ದೇಶ. ಆದರೆ ಈ ಹಣ ಕಂಪೆನಿಯದ್ದಲ್ಲ. ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಕಷ್ಟ ಪಟ್ಟು ದುಡಿದು ಉಳಿತಾಯ ಮಾಡಿದ್ದ ಮತ್ತು ಸಾಲ‌ ಮಾಡಿದ ಹಣ. 11 ಸಾವಿರ ರೂಪಾಯಿ ಪಾವತಿಸಿ ಪ್ರಾಥಮಿಕ ಸದಸ್ಯರಾದ ಯಾರಿಗೂ ಒಂದೇ ಒಂದು ರೂಪಾಯಿ ಸಿಕ್ಕಿಲ್ಲ. ಇದರಲ್ಲಿ ಕೆಲವು ಏಜೆಂಟರಿಗೆ ಮಾತ್ರ ಲಾಭ ಇದೆ. ಅವರು ಬ್ರೈನ್ ವಾಶ್ ಮಾಡಿ ಯುವಕರು, ಮಹಿಳೆಯರನ್ನು ಸದಸ್ಯರನ್ನಾಗಿ ಮಾಡುತ್ತಾರೆ. 99.99 ಶೇಕಡಾ ಜನರು ಇದರಲ್ಲಿ ಮೋಸ ಹೋಗುತ್ತಾರೆ. ಮೋಸ ಹೋದವರು ಪೊಲೀಸ್ ದೂರು ನೀಡುವ ಅಂದರೆ ಹಣ ಪಾವತಿಸಿದ ಹಣಕ್ಕೆ ಯಾವುದೇ ದಾಖಲೆ ಪತ್ರಗಳು, ಸಾಕ್ಷಿಗಳು ಅವರ ಬಳಿ ಇರುವುದಿಲ್ಲ. ಆ ರೀತಿ ಕಂಪೆನಿಗಳು ನೋಡಿಕೊಳ್ಳುತ್ತದೆ. ಈಗ ಆ ಕಂಪೆನಿ ಬಂದ್ ಆಗಿದೆ. ಪ್ರಸಕ್ತ ನಾನು ಮೈಸೂರಿನ ನರ್ಸರಿಯೊಂದರಲ್ಲಿ ದುಡಿಯುತ್ತಿದ್ದೇನೆ.

- ಯಾಸರ್ ಫರಂಗಿಪೇಟೆ, ಮೋಸ ಹೋದ ಯುವಕ

ವರ್ಷದ ಹಿಂದೆ ಅಬುಧಾಬಿಯಿಂದ ರಜೆಯ ನಿಮಿತ್ತ ಊರಿಗೆ ಬಂದಿದ್ದ ಸಂದರ್ಭದಲ್ಲಿ ಗೆಳೆಯನೊಬ್ಬ ನೆಟ್ ವರ್ಕ್ ಕಂಪೆನಿಯೊಂದನ್ನು ಪರಿಚಯಿಸಿ ಅದರ ತರಗತಿಗೆ ಅವನದ್ದೇ ಖರ್ಚಿನಲ್ಲಿ ಕರೆದುಕೊಂಡು ಹೋಗಿದ್ದ. ತರಗತಿ ಆದ ಬಳಿಕ ಅದರಲ್ಲಿ ಮೋಸ ಇದೆ ಎಂದು ಅವನಿಗೆ ನಾನು ಎಚ್ಚರಿಸಿದ್ದೆ. ಆದರೆ ಆಗಾಗಲೇ ಊರಿನ ಗೆಳೆಯರು, ಪರಿಚಯಸ್ಥ ಹಲವು ಯುವಕರು 11 ಸಾವಿರ ರೂ.‌ ಪಾವಸಿ ಸದಸ್ಯತ್ವ ಪಡೆದಿದ್ದರು. ಅವರೆಲ್ಲರೂ ಮಾರುಕಟ್ಟೆ, ಬಾಳೆ ಅಂಗಡಿ, ಮೇಸ್ತ್ರಿ ಸಹಾಯಕ, ಕಟ್ಟಿಗೆ ಮಿಲ್, ಹೂವಿನ ಅಂಗಡಿಯಲ್ಲಿ ದುಡಿಯುವವರು. ಅಲ್ಲದೆ ಕೆಲವು ಮಹಿಳೆಯರೂ ಸೇರಿದ್ದರು. ಲಕ್ಷಾಂತರ ರೂಪಾಯಿ ನೀಡಿ ಸದಸ್ಯತ್ವ ಪಡೆದವರೂ ಇದ್ದಾರೆ‌. ಅವರೆಲ್ಲರಿಗೂ ಲಾಭ ಬಿಡಿ ಪಾವತಿಸಿದ ಹಣವೂ ಸಿಕ್ಕಿಲ್ಲ. ಈಗಲೂ ತುಂಬಾ ಮಂದಿ ಮೋಸ ಹೋಗುತ್ತಿದ್ದಾರೆ. ಇದು ಒಂದು ತಾಲೂಕು, ಜಿಲ್ಲೆಗೆ ಸೀಮಿತವಾಗಿಲ್ಲ. ರಾಜ್ಯ, ದೇಶಾದ್ಯಂತ ನಡೆಯುತ್ತಿದೆ. ಪ್ರಸಕ್ತ ನಾನು ಕೆಲಸ ಮಾಡುತ್ತಿರುವ ಅಬುಧಾಬಿಯಲ್ಲೂ ಕೆಲವರು ಬಂದು ನೆಟ್ ವರ್ಕ್ ಬ್ಯುಸಿನೆಸ್ ಗೆ ಸೇರುವಂತೆ ಒತ್ತಾಯಿಸುತ್ತಾರೆ. ಇಂಥಹ ಮೋಸದ ಜಾಲದ ಬಗ್ಗೆ ಜನರು ಜಾಗ್ರತರಾಗಬೇಕು.

- ಹಫೀಝ್ ಅಬುಧಾಬಿ, ಮೋಸದಿಂದ ಪಾರಾದ ತುಂಬೆಯ ಯುವಕ

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News