ಪುತ್ತೂರು: ಮತ್ತೆ ಮೂರು ಕೊರೋನ ಪಾಸಿಟಿವ್ ಪ್ರಕರಣ ಪತ್ತೆ

Update: 2020-07-14 07:37 GMT

ಪುತ್ತೂರು, ಜು.14: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಮಂಗಳವಾರ ಮತ್ತೆ ಮೂರು ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಮಹಾರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದ 39 ವರ್ಷದ ಯುವಕನಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಆತನ ಸಹದ್ಯೋಗಿಗೆ ಕೊರೋನ ದೃಢಪಟ್ಟ ಹಿನ್ನೆಲೆಯಲ್ಲಿ ಯುವಕ ಮಂಗಳೂರಿನ ಕೋವಿಡ್ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ಅವರ ಗಂಟಲು ದ್ರವ ಪರೀಕ್ಷೆ ಪಾಸಿಟಿವ್ ಬಂದಿತ್ತು. ಸಹದ್ಯೋಗಿಯ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ.

ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜ್ವರದ ಕಾರಣ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಇವರಲ್ಲಿ ಮಂಗಳವಾರ ಕೊರೋನ ದೃಢಪಟ್ಟಿದೆ.

ಪುತ್ತೂರು ನಗರಸಭಾ ವ್ಯಾಪ್ತಿಯ ಮೊಟೆತ್ತಡ್ಕ ನಿವಾಸಿ 62 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಕೊರೋನ ದೃಢಪಟ್ಟಿದೆ. ಇವರು ಈಗಾಗಲೇ ಜ್ವರದ ಕಾರಣದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಈ ತನಕ ಒಟ್ಟು 56 ಕೊರೋನ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News