ಉಡುಪಿ: 14 ದಿನಗಳ ಕಾಲ ಗಡಿ ಸೀಲ್ ಡೌನ್

Update: 2020-07-14 09:05 GMT

ಉಡುಪಿ, ಜು.14: ಗುರುವಾರದಿಂದ ಮುಂದಿನ 14 ದಿನಗಳ ಕಾಲ ಉಡುಪಿ ಜಿಲ್ಲೆಯ ಎಲ್ಲಾ ಗಡಿಗಳನ್ನು ಸೀಲ್‌ಡೌನ್ ಮಾಡಲು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಕರೆದ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆ ಬೆಂಗಳೂರಿನಲ್ಲಿ ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ನೀಡಿದ ಸೂಚನೆಯಂತೆ ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದಿನ ಸಭೆ ನಡೆದು, ಕೋವಿಡ್-19ರ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮದ ಕುರಿತಂತೆ ಚರ್ಚೆ ನಡೆದು ಈ ನಿರ್ಧಾರಕ್ಕೆ ಬರಲಾಯಿತು ಎಂದು ಅವರು ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಗಡಿ ಭಾಗದಿಂದ ಹೊರಗೆ ಹೋಗುವವರಿಗೆ ಹಾಗೂ ಒಳಗೆ ಬರುವವರಿಗೆ ನಾಳೆ ರಾತ್ರಿ (ಬುಧವಾರ) 8:00ಗಂಟೆಯವರೆಗೆ ಮುಕ್ತ ಅವಕಾಶ ಕಲ್ಪಿಸಲು ಸಹ ನಿರ್ಧರಿಸಲಾಗಿದೆ. ಆ ಬಳಿಕ ಜಿಲ್ಲೆಯ ಎಲ್ಲಾ ಗಡಿಗಳನ್ನು ಸೀಲ್‌ಡೌನ್ ಮಾಡಲಾಗುವುದು. ಹೀಗಾಗಿ ಜಿಲ್ಲೆಯಲ್ಲಿ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವಂತೆ ಸಂಪೂರ್ಣ ಲಾಕ್‌ಡೌನ್ ಇರುವುದಿಲ್ಲ.

ರಾಜ್ಯ ಸರಕಾರದ ಹಿಂದಿನ ನಿರ್ಧಾರದಂತೆ ರವಿವಾರದಂದು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಇರುತ್ತದೆ. ಗಡಿ ಸೀಲ್‌ಡೌನ್ ಸಂದರ್ಭದಲ್ಲಿ ತುರ್ತುಸೇವೆಗಳಿಗೆ ಗಡಿಯಿಂದ ತೆರಳಲು ಹಾಗೂ ಆಗಮಿಸಲು ಅವಕಾಶ ನೀಡುವ ಬಗ್ಗೆಯೂ ಸಹಮತ ವ್ಯಕ್ತವಾಯಿತು ಎಂದು ತಿಳಿದುಬಂದಿದೆ.

ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡದಿರಲು, ರಿಕ್ಷಾ ಹಾಗೂ ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶ ನೀಡಲು ಸಹ ಸಭೆ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ.

14ದಿನಗಳ ಸೀಲ್‌ಡೌನ್ ಬಳಿಕವೂ ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚಾದರೆ ಮುಂದೆ ಸಂಪೂರ್ಣ ಸೀಲ್‌ಡೌನ್ ಮಾಡುವ ಬಗ್ಗೆ ಪರಿಶೀಲಿಸಲು ಸಹ ಸಭೆ ನಿರ್ಧರಿಸಿತು ಎಂದು ಹೇಳಲಾಗಿದೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News