ಕೊರೋನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಹಿಳಾ ಅಧಿಕಾರಿ ಅದೇ ಸೋಂಕಿಗೆ ಬಲಿ

Update: 2020-07-14 10:21 GMT

ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಸೇವೆ ಸಲ್ಲಿಸುತ್ತಿದ್ದ ಹೂಗ್ಲಿ ಜಿಲ್ಲೆಯ ಚಂದನನಗರ್ ಉಪವಿಭಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್, 38 ವರ್ಷದ ದೇಬದತ್ತ ರಾಯ್ ಅವರು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. ದೇಬದತ್ತ ರಾಯ್ ಅವರು ತಮ್ಮ ಪತಿ ಹಾಗೂ ನಾಲ್ಕು ವರ್ಷದ ಪುತ್ರನನ್ನು ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ  ಹಿನ್ನೆಲೆಯಲ್ಲಿ ಅವರಿಗೆ ಕೊಲ್ಕತ್ತಾದ ಡಮ್ ಡಮ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಗೃಹ ಕ್ವಾರಂಟೈನಿನಲ್ಲಿರಲು ಸಲಹೆ ನೀಡಲಾಗಿತ್ತು.

ಆದರೆ ರವಿವಾರ ಉಸಿರಾಟದ ತೀವ್ರ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸೇರಂಪೋರ್‍ನ ಶ್ರಮಜೀಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಸೋಮವಾರ ಮುಂಜಾನೆ ಅವರು ನಿಧನರಾಗಿದ್ದಾರೆ.

ಹೂಗ್ಲಿ ಜಿಲ್ಲೆಗೆ ವಲಸಿಗ ಕಾರ್ಮಿಕರನ್ನು ಹೊತ್ತು ಬರುತ್ತಿದ್ದ ರೈಲುಗಳು ಹಾಗೂ ಕಾರ್ಮಿಕರ ಶಿಬಿರಗಳ ಉಸ್ತುವಾರಿಯನ್ನು  ಅವರಿಗೆ ವಹಿಸಲಾಗಿತ್ತು.

ಪಶ್ಚಿಮ ಬಂಗಾಳ ಸಿವಿಲ್ ಸರ್ವಿಸಸ್‍ ನ 2010 ಬ್ಯಾಚಿನ ಅಧಿಕಾರಿಯಾಗಿದ್ದ ದೇಬದತ್ತ ಅವರು ಚಂದನನಗರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಅಧಿಕಾರ ವಹಿಸುವುದಕ್ಕೆ ಮುನ್ನ ಪುರುಲಿಯಾದಲ್ಲಿ ಬಿಡಿಒ ಆಗಿ ಸೇವೆ ಸಲ್ಲಿಸಿದ್ದರು.

ಅವರ ನಿಧನಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News