ಪಿಯುಸಿ ಫಲಿತಾಂಶ: ದ.ಕ.ದೊಂದಿಗೆ ಅಗ್ರಸ್ಥಾನ ಹಂಚಿಕೊಂಡ ಉಡುಪಿ

Update: 2020-07-14 12:32 GMT
ಅಭಿಜ್ಞಾ ರಾವ್-596(ವಿಜ್ಞಾನ), ಮೇಧಾ ಎನ್.ಭಟ್-593(ವಿಜ್ಞಾನ), ಬಿ.ರಿತಿಕಾ ಕಾಮತ್-594 (ಕಾಮರ್ಸ್), ಸ್ವಾತಿ ಪೈ-594 (ಕಾಮರ್ಸ್), ಕೆ.ಅನಂತಕೃಷ್ಣ ನಾಯಕ್- 586(ಕಾಮರ್ಸ್), ಸುಮೇಧ- 584 (ಕಾಮರ್ಸ್), ಸಮನ್ವಿ-573 (ಆರ್ಟ್ಸ್)

ಉಡುಪಿ, ಜು.14: ಕಳೆದ ವರ್ಷ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಅಗ್ರಸ್ಥಾನಿಯಾಗಿದ್ದ ಉಡುಪಿ ಜಿಲ್ಲೆ, ಇಂದು ಪ್ರಕಟಗೊಂಡ 2020ನೇ ಸಾಲಿನ ಫಲಿತಾಂಶದಲ್ಲಿ ತನ್ನ ನಿಕಟ ಪ್ರತಿಸ್ಪರ್ಧಿಯಾದ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಅಗ್ರಸ್ಥಾನವನ್ನು ಹಂಚಿಕೊಂಡಿದೆ. ಶೇ.90.71 ಉತ್ತೀರ್ಣತೆಯ ಫಲಿತಾಂಶದೊಂದಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಜಂಟಿಯಾಗಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿವೆ.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯದ ಅಗ್ರಸ್ಥಾನಕ್ಕಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ 2013ರಿಂದ ಜಿದ್ದಾಜಿದ್ದಿನ ಸೆಣಸಾಟ ನಡೆಯುತ್ತಿದ್ದು, ಇಷ್ಟು ವರ್ಷಗಳ ಖುಷಿ-ನಿರಾಶೆ ಅನುಭವದ ಬಳಿಕ ಈ ಬಾರಿ ಎರಡೂ ಜಿಲ್ಲೆಗಳು ಸಮಾನ ಸಾಧನೆಯ ತೃಪ್ತಿ ಅನುಭವಿಸುವಂತಾಗಿದೆ.

 2013ರಿಂದ ಪಿಯುಸಿ ಫಲಿತಾಂಶದ ಮೊದಲೆರಡು ಸ್ಥಾನಗಳು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಓಲಾಡುತ್ತಿವೆ. 2013ರಲ್ಲಿ ಉಡುಪಿ ಜಿಲ್ಲೆ ಶೇ.86.24 ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆದಿದ್ದರೆ, 2014ರಿಂದ 2016ರವರೆಗೆ ಸತತ ಮೂರು ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನ ವನ್ನು ತನ್ನ ಬಳಿ ಉಳಿಸಿಕೊಂಡಿತ್ತು.

ಮೂರು ವರ್ಷಗಳ ಸತತ ಪ್ರಯತ್ನದ ಬಳಿಕ 2017ರಲ್ಲಿ ಶೇ.90.01 ಫಲಿತಾಂಶದೊಂದಿಗೆ ರಾಜ್ಯದ ಅಗ್ರಸ್ಥಾನವನ್ನು ಮರಳಿ ಪಡೆದ ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ (89.92)ವನ್ನು ಎರಡನೇ ಸ್ಥಾನಕ್ಕೆ ತಳ್ಳಿತ್ತು. ಇದಕ್ಕೆ ಎದಿರೇಟು ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆ, 2018ರಲ್ಲಿ ಶೇ.91.49 ಉತ್ತೀರ್ಣತೆ ಯೊಂದಿಗೆ ಉಡುಪಿಯನ್ನು ಮತ್ತೆ (ಶೇ.90.67) ಎರಡನೇ ಸ್ಥಾನಕ್ಕೆ ತಳ್ಳಿತ್ತು. ಆದರೆ ಕಳೆದ ವರ್ಷ (2019) ಉಡುಪಿ ಜಿಲ್ಲೆ ಶೇ.92.20ರ ಸಾಧನೆಯೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿತ್ತು. ಈ ಬಾರಿ ಉಡುಪಿ ಜಿಲ್ಲೆಯ 27 ಕೇಂದ್ರಗಳಲ್ಲಿ ಮೊದಲ ಬಾರಿ ಪರೀಕ್ಷೆ ಬರೆದ ಒಟ್ಟು 13775 ವಿದ್ಯಾರ್ಥಿಗಳಲ್ಲಿ 12495 ಮಂದಿ ಉತ್ತೀರ್ಣರಾಗಿ ಶೇ.90.71 ಫಲಿತಾಂಶ ಬಂದಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 15073 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 12961 ಮಂದಿ ತೇರ್ಗಡೆಗೊಂಡು ಶೇ.85.99 ಫಲಿತಾಂಶ ಬಂದಿದೆ.

ಪರೀಕ್ಷೆ ಬರೆದ 7353 ವಿದ್ಯಾರ್ಥಿಗಳಲ್ಲಿ 5988 ಮಂದಿ (ಶೇ.81.44) ತೇರ್ಗಡೆಗೊಂಡರೆ, 7720 ವಿದ್ಯಾರ್ಥಿನಿಯರಲ್ಲಿ 6973 (ಶೇ.90.32) ಮಂದಿ ತೇರ್ಗಡೆಗೊಂಡಿದ್ದಾರೆ. ನಗರ ಪ್ರದೇಶದ ಶೇ.90.42ರಷ್ಟು ಹಾಗೂ ಗ್ರಾಮೀಣ ಭಾಗದ ಶೇ.90.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇನ್ನು ವಿಜ್ಞಾನ ವಿಭಾಗದಲ್ಲಿ ಶೇ.95.8ರಷ್ಟು ಮಂದಿ, ಕಾಮರ್ಸ್ ವಿಭಾಗದಲ್ಲಿ ಶೇ.91.56ರಷ್ಟು ಮಂದಿ ಹಾಗೂ ಕಲಾ ವಿಭಾಗದಲ್ಲಿ ಶೇ.68.87ರಷ್ಟು ಮಂದಿ ಈ ಬಾರಿ ಉತ್ತೀರ್ಣಗೊಂಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಬರೆದು ಶೇ.66.23ರಷ್ಟು ಮಂದಿ ಪಾಸಾದರೆ, ಇಂಗ್ಲೀಷ್ ಮಾಧ್ಯಮದಲ್ಲಿ ಬರೆದ ಶೇ.91.17ರಷ್ಟು ಮಂದಿ ತೇರ್ಗಡೆಹೊಂದಿದ್ದಾರೆ.

ವಿಜ್ಞಾನದಲ್ಲಿ ಪ್ರಥಮ:

ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಪ್ರಕಟಿಸಿದ ಫಲಿತಾಂಶದಲ್ಲಿ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಅಭಿಜ್ಞಾ ರಾವ್ ಅವರು 596 ಅಂಕಗಳನ್ನು ಗಳಿಸುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯದ ಅಗ್ರಸ್ಥಾನವನ್ನು ಬೆಂಗಳೂರಿನ ವಿದ್ಯಾರ್ಥಿಯೊಂದಿಗೆ ಹಂಚಿಕೊಂಡಿದ್ದಾರೆ. ಇದೇ ಕಾಲೇಜಿನ ಗ್ರೀಷ್ಮಾ ರಾವ್ ಹಾಗೂ ಎಂಜಿಎಂ ಪದವಿ ಪೂರ್ವ ಕಾಲೇಜಿನ ಮೇಧಾ ಎನ್.ಭಟ್ ಅವರು ತಲಾ 593 ಅಂಕಗಳಿಸಿದ್ದು ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈವರೆಗೆ ಸಿಕ್ಕಿರುವ ಮಾಹಿತಿಗಳಂತೆ ಕಾಮರ್ಸ್ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಬಿ.ರಿತಿಕಾ ಕಾಮತ್ ಹಾಗೂ ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಸ್ವಾತಿ ಪೈ ತಲಾ 594 ಅಂಕಗಳೊಂದಿಗೆ ಜಿಲ್ಲೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರು ರಾಜ್ಯದಲ್ಲಿ ಉಳಿದವರೊಂದಿಗೆ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಎಂಜಿಎಂ ಕಾಲೇಜಿನ ಕೆ.ಅನಂತಕೃಷ್ಣ ನಾಯಕ್ 586, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಸುಮೇಧ 584 ಅಂಕಗಳನ್ನು ಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ ಎಂಜಿಎಂ ಪದವಿ ಪೂರ್ವ ಕಾಲೇಜಿನ ಸಮನ್ವಿ ಅವರು 573 (ಶೇ.95.5) ಅಂಕಗಳನ್ನು ಗಳಿಸಿದ್ದು, ಉಳಿದಂತೆ ನಾಳೆ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಹೆಚ್ಚಿನ ಮಾಹಿತಿ ದೊರೆಯುವ ನಿರೀಕ್ಷೆ ಇದೆ.

8ಕಾಲೇಜುಗಳಿಗೆ ಶೇ.100: ಜಿಲ್ಲೆಯಲ್ಲಿ ಇದುವರೆಗೆ ಸಿಕ್ಕಿರುವ ಮಾಹಿತಿಯಂತೆ ಮೂರು ಸರಕಾರಿ ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ಒಟ್ಟು ಎಂಟು ಕಾಲೇಜುಗಳು ಶೇ.100 ಫಲಿತಾಂಶವನ್ನು ಪಡೆದಿವೆ. ಇವುಗಳೆಂದರೆ ಸರಕಾರಿ ಪದವಿ ಪೂರ್ವ ಕಾಲೇಜು ಶಿರ್ಲಾಲು ಕಾರ್ಕಳ, ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಆರೂರು ಬ್ರಹ್ಮಾವರ ಹಾಗೂ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಮಿಯಾರು ಕಾರ್ಕಳ.

ಉಳಿದಂತೆ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಾದ ವಿದ್ಯೋದಯ ಪದವಿ ಪೂರ್ವ ಕಾಲೇಜು ಉಡುಪಿ, ಬ್ರಹ್ಮಾವರದ ನಿರ್ಮಲಾ ಪದವಿ ಪೂರ್ವ ಕಾಲೇಜು, ಉಡುಪಿಯ ಮಹೇಶ್ ಪದವಿ ಪೂರ್ವ ಕಾಲೇಜು, ಕ್ರೈಸ್ಟ್ಕಿಂಗ್ ಪದವಿ ಪೂರ್ವ ಕಾಲೇಜು ಕಾರ್ಕಳ ಹಾಗೂ ಮೂಳೂರು ಅನ್ಇಹ್ಸಾನ್ ಪದವಿ ಪೂರ್ವ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ಪಡೆದಿವೆ ಎಂದು ಜಿಲ್ಲಾ ಪದವಿ ಪೂರ್ವ ಇಲಾಖೆಯ ಮೂಲಗಳು ತಿಳಿಸಿವೆ. ಆಯಾ ಕಾಲೇಜುಗಳಲ್ಲಿ ನಾಳೆ ಬೆಳಗ್ಗೆ ಅಧಿಕೃತ ಫಲಿತಾಂಶ ಪ್ರಕಟಗೊಂಡ ಬಳಿಕವಷ್ಟೇ ಜಿಲ್ಲೆಯ ಫಲಿತಾಂಶದ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಮೂಲ ಹೇಳಿವೆ. 

ಎಲ್ಲರ ಪ್ರಯತ್ನದ ಫಲ

ಜಿಲ್ಲೆ ಸತತ ಎರಡನೇ ಬಾರಿಗೆ ಈ ಸಾಧನೆ ಮಾಡಿರುವುದು ಸಂಬಂಧಿತ ಎಲ್ಲರ ಸಾಮೂಹಿಕ ಪ್ರಯತ್ನದ ಫಲ. ಜಿಲ್ಲೆಯ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ಪ್ರಾಂಶುಪಾಲರು, ಆಡಳಿತ ಮಂಡಳಿಯವರ ಸಹಕಾರ ಹಾಗೂ ಮಕ್ಕಳು ಮತ್ತು ಪೋಷಕರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮೊದಲಿನಿಂದಲೂ ಶೈಕ್ಷಣಿಕ ಜಾಗೃತಿ ಇದ್ದೇಇದೆ. ಇದಕ್ಕಾಗಿ ನಾವು ಮಕ್ಕಳ ಮೇಲೆ ವಿಶೇಷ ಒತ್ತಡ ಹೇರಬೇಕಾಗಿಲ್ಲ. ಅವರು ತಾವಾಗಿಯೇ ಉತ್ತಮ ಅಂಕಗಳಿಗಾಗಿ ಕಠಿಣ ಪರಿಶ್ರಮ ಪಡುತ್ತಾರೆ. ಕರಾವಳಿಯ ಈ ಪ್ರವೃತ್ತಿ ಇಂದಿನ ಫಲಿತಾಂಶದಲ್ಲಿ ವ್ಯಕ್ತವಾಗಿದೆ.

 -ಭಗವಂತ ಕಟ್ಟೀಮನಿ, ಡಿಡಿಪಿಯು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News