ಜು.15ರ ರಾತ್ರಿಯಿಂದ 14 ದಿನಗಳು ಉಡುಪಿಯ ಗಡಿಗಳು ಸೀಲ್‌ಡೌನ್: ಡಿಸಿ ಜಗದೀಶ್

Update: 2020-07-14 20:02 GMT

ಉಡುಪಿ, ಜು.14: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜು.15ರ ರಾತ್ರಿ 8ಗಂಟೆಯಿಂದ ಜು.29ರವರೆಗೆ ಒಟ್ಟು 14 ದಿನಗಳ ಕಾಲ ಜಿಲ್ಲೆಯ ಗಡಿಗಳನ್ನು ಸೀಲ್‌ಡೌನ್ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ವೈದ್ಯಕೀಯ ತಜ್ಞ ಸಮಿತಿ ಯೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯ ಒಳಗೆ ಎಲ್ಲ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ತುರ್ತು ವೈದ್ಯಕೀಯ ಪ್ರಕರಣ, ಸರಕು ಸಾಗಾಣಿಕೆಗಳಿಗೆ ಯಾವುದೇ ನಿರ್ಬಂಧ ಇಲ್ಲ. ಜಿಲ್ಲೆಗೆ ಬರುವವರು ಹಾಗೂ ಹೋಗುವವರು ಜು.15ರ 8 ಗಂಟೆಯ ಒಳಗೆ ಬರಬಹುದು ಅಥವಾ ಹೊರಗೆ ಹೋಗಬಹುದು ಎಂದರು.

ಲಾಕ್‌ಡೌನ್ ಅಗತ್ಯ ಇಲ್ಲ

ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಮಂದಿಗೆ ಸರಾಸರಿ 2,786 ಮಂದಿಯನ್ನು ಕೊರೋನ ಪರೀಕ್ಷೆಗೆ ಒಳಪಡಿಸಿದರೆ, ಉಡುಪಿ ಜಿಲ್ಲೆಯಲ್ಲಿ 5166 ಮಂದಿಯನ್ನು ಪರೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಶೇ.3 (ರಾಜ್ಯದಲ್ಲಿ ಶೇ.7.70), ಪ್ರಕರಣಗಳು ಎರಡು ಪಟ್ಟು ಆಗಲು ಬೇಕಾದ ದಿನ 39(ರಾಜ್ಯದಲ್ಲಿ 10), ಸಾವಿನ ಪ್ರಮಾಣ ಶೇ.2.5(ರಾಜ್ಯದಲ್ಲಿ ಶೇ.12.3) ಮತ್ತು ಸಕ್ರಿಯ ಪ್ರಕರಣಗಳು 390(ರಾಜ್ಯದಲ್ಲಿ 24,572) ಇವೆ. ಇದು ಸುತ್ತಮುತ್ತಲಿನ ಜಿಲ್ಲೆಗಳಿಗೆ ಹೋಲಿಸಿದರೆ ತೀರಾ ಕಡಿಮೆ ಎಂದು ಡಿಸಿ ತಿಳಿಸಿದರು.

ಜಿಲ್ಲೆಯಲ್ಲಿ ರೋಗ ಲಕ್ಷಣಗಳಿರುವವರಿಗೆ 470 ಹಾಗೂ ಲಕ್ಷಣ ಇಲ್ಲದವರಿಗೆ 660 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 400 ಬೆಡ್‌ಗಳು ಮಾತ್ರ ತುಂಬಿದ್ದು, ಇನ್ನು 700 ಬೆಡ್‌ಗಳು ಖಾಲಿ ಇವೆ. ಅಲ್ಲದೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 1800 ಬೆಡ್‌ಗಳನ್ನು ಗುರುತಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 1500 ಬೆಡ್‌ಗಳನ್ನು ಕೋವಿಡ್ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ. ಈ ಎಲ್ಲ ಕಾರಣಕ್ಕಾಗಿ ನಮ್ಮಲ್ಲಿ ಲಾಕ್‌ಡೌನ್ ಅಗತ್ಯ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ಬಸ್ ಸಂಚಾರ ಸ್ಥಗಿತ

ಸೀಲ್‌ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಬಸ್ ಸಂಚಾರ ಇರುವುದಿಲ್ಲ. ಯಾವುದೇ ಸಂತೆಗಳು ನಡೆಯುವುದಿಲ್ಲ. ಯಾವುದೇ ಧಾರ್ಮಿಕ, ರಾಜಕೀಯ, ಸಾಮಾಜಿಕ ಸಭೆ, ಸಮಾರಂಭಗಳು ಇರುವುದಿಲ್ಲ. ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಅವಕಾಶ ಇರುವುದಿಲ್ಲ. ಪೂರ್ವ ನಿರ್ಧರಿತ ಮದುವೆ ಸಮಾರಂಭಗಳನ್ನು ಸಂಬಂಧಿತ ತಹಶೀಲ್ದಾರರಿಂದ ಕಡ್ಡಾಯವಾಗಿ ಅನುಮತಿ ಪಡೆದು 50 ಜನಕ್ಕೆ ಮೀರದಂತೆ ನಡೆಸಬಹುದಾಗಿದೆ ಎಂದರು.

ಸರಕಾರದ ಆದೇಶದಂತೆ ಅಂತ್ಯ ಸಂಸ್ಕಾರದಲ್ಲಿ 20 ಮಂದಿ ಮಾತ್ರ ಭಾಗ ವಹಿಸಬಹುದು. ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಮಾತ್ರ ಅವಕಾಶ ಇದ್ದು, ಈ ಸಮಯದಲ್ಲಿ 20ಕ್ಕಿಂತ ಹೆಚ್ಚು ಜನ ಸೇರು ವಂತಿಲ್ಲ. ಯಾವುದೇ ವಿಶೇಷ ಪೂಜೆ, ಆಚರಣೆಗಳು ಇರುವುದಿಲ್ಲ. ರವಿವಾರ ಹಿಂದಿನಂತೆ ಸಂಪೂರ್ಣ ಲಾಕ್‌ಡೌನ್ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಗಡಿ ಸೀಲ್‌ಡೌನ್ ಮಾಡುವುದರಿಂದ ಹೊರ ಜಿಲ್ಲೆಯಿಂದ ಪ್ರತಿದಿನ ಸಂಚರಿಸುವ ಬ್ಯಾಂಕ್ ಸೇರಿದಂತೆ ವಿವಿಧ ಉದ್ಯೋಗಿಗಳಿಗೆ ಮತ್ತು ತುರ್ತು ಸಂದರ್ಭದವರಿಗೆ ಜಿಲ್ಲಾಡಳಿತದಿಂದ ಪಾಸ್ ವ್ಯವಸ್ಥೆಯನ್ನು ಮಾಡಲಾಗುವುದು. ತಹಶೀಲ್ದಾರ್ ಮೂಲಕ ಅರ್ಜಿ ಸಲ್ಲಿಸಿ ಪಾಸ್ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೂತ್ ಉಪಸ್ಥಿತರಿದ್ದರು.

'ಎಲ್ಲರಿಗೂ ಉಚಿತ ಚಿಕಿತ್ಸೆ'

ಜಿಲ್ಲೆಯಲ್ಲಿ ಈವರೆಗೆ ಕೊರೋನ ಸಂಬಂಧ ದಾಖಲಾಗಿರುವ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಯಾರಿಂದಲೂ ಹಣ ಪಡೆದುಕೊಂಡಿಲ್ಲ. ಉಡುಪಿಯ ಟಿ.ಎಂ.ಎ.ಪೈ ಕೋವಿಡ್ ಆಸ್ಪತ್ರೆಯಲ್ಲೂ ಜಿಲ್ಲಾಡಳಿತ ಶಿಫಾರಸ್ಸು ಮಾಡಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಸರಕಾರ ನಿಗದಿಪಡಿಸಿದ ಹಣವನ್ನು ನೀಡುತ್ತದೆ. ಯಾವುದೇ ರೋಗಿಗಳು ಹಣ ನೀಡಬೇಕಾದ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು. 

20 ಮಂದಿಗೆ ಹೋಮ್ ಐಸೊಲೇಶನ್

ಜಿಲ್ಲೆಯಲ್ಲಿ ಒಟ್ಟು 20 ಮಂದಿ ಸೋಂಕಿತರು ಹೋಮ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ವರ್ಷದಿಂದ 50ವರ್ಷದೊಳಗಿನ ಯಾವುದೇ ತೀವ್ರತರದ ಕಾಯಿಲೆಗಳಿಲ್ಲದವರಿಗೆ ಮಾತ್ರ ಈ ಚಿಕಿತ್ಸೆ ನೀಡಲಾಗುವುದು. ನಮ್ಮ ಆರೋಗ್ಯ ತಂಡ ಇದಕ್ಕೆ ಮನೆ ಸೂಕ್ತ ಎಂಬುದಾಗಿ ವರದಿ ನೀಡಿದರೆ ಮಾತ್ರ ಈ ವ್ಯವಸ್ಥೆ ಮಾಡಲಾಗುವುದು. ಈ ರೋಗಿಗಳಿಗೆ ಆನ್‌ಲೈನ್ ಮೂಲಕ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಬೆಂಗಳೂರು ಸಹಿತ ಹೊರ ಜಿಲ್ಲೆಗಳಿಂದ ಆಗಮಿ ಸುವವರು ಸ್ವಯಂ ಪ್ರೇರಿತ ಹೋಮ್ ಕ್ವಾರಂಟೇನ್‌ಗೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News