ದ.ಕ. ಜಿಲ್ಲೆಯಲ್ಲಿ ಜು.23ರವರೆಗೆ ಲಾಕ್‌ಡೌನ್: ಏನಿರುತ್ತೆ ? ಏನಿರಲ್ಲ ? ಇಲ್ಲಿದೆ ಮಾಹಿತಿ

Update: 2020-07-14 14:27 GMT
ಫೈಲ್ ಚಿತ್ರ

‌ಮಂಗಳೂರು, ಜು.14: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜು. 15ರ ರಾತ್ರಿ 8 ಗಂಟೆಯಿಂದ ಜು. 23ರ ಸಂಜೆ 5 ಗಂಟೆಯವರೆಗೆ ಲಾಕ್‌ಡೌನ್ ವಿಧಿಸಲಾಗಿದೆ. ಈ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಹಾಗೂ ಖಾಸಗಿ ವಾಹನಗಳಲ್ಲಿ ಸಂಚಾರವನ್ನು ತುರ್ತು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ನಿಷೇಧಿಸಲಾಗಿದೆ. ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು ಮುಚ್ಚಲಿದ್ದು, ಕಂಟೇನ್‌ಮೆಂಟ್ ವಲಯಗಳು ಸಂಪೂರ್ಣ ಬಂದ್‌ಆಗಿರುತ್ತದೆ. ಹೊರಗೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 11 ಗಂಟೆಯವರೆಗೆ ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು ಸೇರಿದಂತೆ ಆಹಾರ, ದವಸ ಧಾನ್ಯಗಳು, ಹಣ್ಣು ತರಕಾರಿ, ಮಾಂಸದ ಅಂಗಡಿಗಳಲ್ಲಿ ಖರೀದಿಗೆ ವಿನಾಯಿತಿ ಇರುತ್ತದೆ. ಈ ಎಲ್ಲಾ ಕಾರ್ಯಗಳನ್ನು ಕೋವಿಡ್ 19 ನಿರ್ವಹಣೆಗಾಗಿ ಇರುವ ನಿಯಮಗಳನ್ನು ಅನುಸರಿಸಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ತಿಳಿಸಿದ್ದಾರೆ.

ಬಾರ್, ಮಾಲ್‌ಗಳು, ವೈನ್‌ಶಾಪ್‌ಗಳು ಸಂಪೂರ್ಣ ಬಂದ್ ಆಗಲಿದ್ದು, ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳೂ ಬಂದ್ ಆಗಿರುತ್ತವೆ.ಜಿಮ್ನಾಷಿಯಂಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳು,ಈಜುಕೊಳಗಳು, ಮನರಂಜನಾ ಉದ್ಯಾನವನಗಳು, ರಂಗಮಂದಿರಗಳು, ಬಾರ್‌ಗಳು ಹಾಗೂ ಅಡಿಟೋರಿಯಂಗಳು, ಸಭಾ ಭವನಗಳು, ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳು, ಸಭೆಗಳು ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.

ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ಜನ ಸಂಚಾರಕ್ಕೆ ಅವಕಾಶವಿಲ್ಲ. ತುರ್ತು ಸಂದರ್ಭದಲ್ಲಿ ಅಥವಾ ಅನುಮತಿಸಲಾದ ಸಂದರ್ಭಗಳಲ್ಲಿ ಮಾತ್ರ ಪ್ರಯಾಣಿಕ ವಾಹನಗಳು ಸಂಚರಿಸಬಹುದಾಗಿದೆ. ಉಳಿದಂತೆ, ಕಂಟೈನ್‌ಮೆಂಟ್ ವಲಯದ ಹೊರಗಿನ ಆರೋಗ್ಯ, ವೈದ್ಯಕೀಯ,ಶಿಕ್ಷಣ, ಪೊಲೀಸ್, ಗೃಹ ರಕ್ಷಕದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಮಂಗಳೂರು ಮಹಾನಗರ ಪಾಲಿಕೆ, ಕಾರಾಗೃಹಗಳ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ.

ಈಗಾಗಲೇ ವೇಳಾಪಟ್ಟಿ ನಿಗದಿಯಾಗಿರುವ ವಿಮಾನ ಮತ್ತು ರೈಲುಗಳು ಲಾಕ್‌ಡೌನ್ ಅವಧಿಯಲ್ಲಿನ ಸಂಚಾರವನ್ನು ನಡೆಸಲಿದೆ. ವಿಮಾನ ಮತ್ತು ರೈಲು ಟಿಕೆಟ್‌ಗಳನ್ನು ವಿಮಾನ ಮತ್ತು ರೈಲುಗಳಲ್ಲಿ ಓಡಾಡುವ ಪ್ರಯಾಣಿಕರ ಪಾಸುಗಳೆಂದು ಪರಿಗಣಿಸಲಾಗುವುದು. ಅದಲ್ಲದೇ ಟ್ಯಾಕ್ಸಿ, ಆಟೋ ರಿಕ್ಷಾಗಳ ಮೂಲಕ ನಿಲ್ದಾಣಕ್ಕೆ ಪ್ರಯಾಣಿಸಲು ಅನುಮತಿಸಿದೆ. ತುರ್ತು ಪರಿಸ್ಥಿತಿಗಾಗಿ ಬಾಡಿಗೆ ತೆಗೆದುಕೊಂಡಿರುವುದನ್ನು ಹೊರತುಪಡಿಸಿ ಟ್ಯಾಕ್ಸಿಗಳು ಮತ್ತು ಕ್ಯಾಬ್ ಚಾಲನೆ ನಿಷೇಧಿಸಲಾಗಿದೆ.

ಶಾಲೆಗಳು, ಕಾಲೇಜುಗಳು, ಶಿಕ್ಷಣ, ತರಬೇತಿ ಕೋಚಿಂಗ್ ಮೊದಲಾದ ಸಂಸ್ಥೆಗಳು ಮುಚ್ಚಿರುತ್ತವೆ. ಆನ್‌ಲೈನ್ ದೂರಶಿಕ್ಷಣ ಕಲಿಕೆಗೆ ಅವಕಾಶ ಮುಂದುವರಿಸಿ ಪ್ರೋತ್ಸಾಹಿಸುವುದು. ಆದರೆ ಈಗಾಗಲೇ ವೇಳಾಪಟ್ಟಿ ನಿಗದಿಯಾದ ಪರೀಕ್ಷೆಗಳಿಗೆ ಕೋವಿಡ್ 19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳಿಗೆ ಒಳಪಟ್ಟು ಅವಕಾಶ ನೀಡಲಾಗಿದೆ. ಆರೋಗ್ಯ, ಪೊಲೀಸ್, ಸರಕಾರಿ ಸೇವಾ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಪ್ರವಾಸಿಗರು ಸೇರಿದಂತೆ ಉದ್ದೇಶಿಸಿದಮತ್ತು ಕ್ವಾರಂಟೈನ್ ಸೌಲಭ್ಯಗಳಿಗೆ ಉದ್ದೇಶಿಸಿ ಉಳಿದಂತೆ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಆತಿಥ್ಯ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳನ್ನು ಆಹಾರ ತಯಾರಿಕೆಗೆ, ಸರಬರಾಜು ಉದ್ದೇಶಕ್ಕಾಗಿ ಮಾತ್ರ ತೆರೆಯಲು ಅನುಮತಿಸಲಾಗಿದೆ. ವೈದ್ಯಕೀಯ ತುರ್ತು ಸೇವೆಗಳಿಗೆ ಅವಕಾಶವಿರಲಿದೆ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನೇ ಪ್ರಯಾಣದ ಪರವಾನಿಗೆಯನ್ನಾಗಿ ಬಳಸಬಹುದು. ಅವರಿಗೆ ಲಭ್ಯವಿರುವ ಟ್ಯಾಕ್ಸಿ, ಆಟೋರಿಕ್ಷಾ ಸಾರಿಗೆಯನ್ನು ಬಳಸಬಹುದು. ಎಸೆಸೆಲ್ಸಿ ಮೌಲ್ಯಮಾಪನಾ ಕೇಂದ್ರಗಳಿಗೆ ತೆರಳುವ ಶಿಕ್ಷಕರಿಗೆ ಅನುಮತಿ ನೀಡಲಾಗುತ್ತದೆ. ಎಲ್ಲಾ ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳು, ಬ್ಯಾಂಕುಗಳು, ವಿಮಾ ಕಚೇರಿಗಳು, ಎಟಿಎಂ, ಪತ್ರಿಕೆ ಮತ್ತುವಿದ್ಯುನ್ಮಾನ ಮಾಧ್ಯಮಕ್ಕೆ ವಿನಾಯಿತಿ ಇರುತ್ತದೆ. ದೂರ ಸಂಪರ್ಕ, ಅಂತರ್ಜಾಲ ಸೇವೆಗಳು, ಪ್ರಸರಣ ಮತ್ತು ಕೇಬಲ್ ಸೇವೆಗಳು, ಮಾಹಿತಿ ತಂತ್ರಜ್ಞಾನ ಸೇವೆಗಳು ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು ಹಾಗೂ ಅಗತ್ಯ ಸೇವೆಗಳಿಗೆ ವಿನಾಯಿತಿ. ನಿರ್ವಹಣಾ ಸೇವೆಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಅಗತ್ಯ ಸೇವೆಗಳನ್ನು ನಿರ್ವಹಿಸುವುದು ಹಾಗೂ ಸಾಧ್ಯವಾದಷ್ಟು ಮನೆಯಿಂದಲೇ ನಿರ್ವಹಿಸುವುದು.

ಇ ಕಾಮರ್ಸ್ ಮೂಲಕ ಆಹಾರ, ಔಷಧಿಗಳು, ವೈದ್ಯಕೀಯ ಸಲಕರಣೆಗಳಂತೆ ಅಗತ್ಯ ವಸ್ತುಗಳ ಸರಬರಾಜು, ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಘಟಕಗಳು ಮತ್ತುಸೇವೆಗಳು, ಭಾರತೀಯ ಭದ್ರತೆಗಳು, ವಿನಿಮಯ ಮಂಡಳಿಯ ಬಂಡವಾಳ ಹಾಗೂ ಋಣ ಮಾರುಕಟ್ಟೆ ಸೇವೆಗಳು, ಶೀತಲೀಕರಣ ಘಟಕಗಳು ಹಾಗೂ ಉಗ್ರಾಣ ಸೇವೆಗಳು, ಇ ಕಾಮರ್ಸ್ ಮೂಲಕ ಸರಕು ಸರಬರಾಜಿಗೆ ವಿನಾಯಿತಿ ಇರಲಿದೆ. ಉಳಿದ ಸಂಸ್ಥೆಗಳು ಅಗತ್ಯವಿರುವಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸುವುದು ಎಂದು ಜಿಲ್ಲಾಧಿಕಾರಿ ನೀಡಿರುವ ಮಾರ್ಗಸೂಚಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News