ಪುತ್ತೂರು: ಕ್ರಿಕೆಟ್ ಆಟದ ವಿಚಾರಕ್ಕೆ ಸಂಬಂಧಿಸಿ ಜಗಳ; ಓರ್ವನಿಗೆ ಚೂರಿ ಇರಿತ

Update: 2020-07-14 14:39 GMT

ಪುತ್ತೂರು: ಕ್ರಿಕೆಟ್ ಆಟದ ವಿಚಾರಕ್ಕೆ ಸಂಬಂಧಿಸಿ ಹೊಡೆದಾಟ ನಡೆದು ಚೂರಿ ಇರಿತಕ್ಕೆ ಓರ್ವ ಗಂಭೀರ ಗಾಯಗೊಳ್ಳುವುದರ ಜೊತೆಗೆ ಐವರು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ರಾತ್ರಿ ಪುತ್ತೂರು ನಗರದ ಹೊರ ವಲಯದ ಬಲ್ನಾಡು ಎಂಬಲ್ಲಿ ನಡೆದಿದೆ.

ಬಲ್ನಾಡು ಜನತಾ ಕಾಲೊನಿ ನಿವಾಸಿಗಳಾದ ಸವಾದ್(23), ಮನ್ಸೂರ್(23), ಮುಸ್ತಫಾ(22), ಅಬ್ಬಾಸ್(21), ಸೈಯದ್(21) ಹಾಗೂ ಇನ್ನೊಂದು ತಂಡದ ದಿನೇಶ್(20) ಆಸ್ಪತ್ರೆಗೆ ದಾಖಲಾದವರು. ಈ ಪೈಕಿ ಸವಾದ್ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಳಿ ಅಂಕಕ್ಕೆ ಬಳಸುವ ಚೂರಿ, ಸೋಡಾ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಜು.12ರಂದು ಲಾಕ್‍ಡೌನ್ ಸಂದರ್ಭದಲ್ಲಿ ಬಲ್ನಾಡು ಆಟದ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಇತ್ತಂಡದ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕದ ಬೆಳವಣಿಗೆಯಲ್ಲಿ ಜು.13 ರಂದು ರಾತ್ರಿ ಹಲ್ಲೆ ನಡೆಸಲಾಗಿದೆ.

ಸೋಮವಾರ ರಾತ್ರಿ  ಮನ್ಸೂರ್, ಮುಸ್ತಫಾ, ಸೈಯದ್ ಮತ್ತು ಸವಾದ್ ಅವರು ಪಕ್ಕದಲ್ಲಿರುವ ಅಂಗಡಿಯೊಂದರಲಿ ಇದ್ದ ವೇಳೆಯಲ್ಲಿ ಗಣೇಶ್ ಎಂಬವರು ಸವಾದ್‍ಗೆ ಕೋಳಿ ಅಂಕಕ್ಕೆ ಬಳಸುವ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಿಡಿಸಲು ಬಂದ ಅಬ್ಬಾಸ್, ಮುಸ್ತಫಾ, ಸೈಯದ್ ಅವರಿಗೆ ಸೋಡಾ ಬಾಟಲಿಯಿಂದ ಯಕ್ಷಿತ್, ಕುಟ್ಟಿಬಾಲ, ಪಟ್ಟೆಬಾಲ, ವಿಜಿತ್, ಮ್ಯಾಕ್ಸಿ, ಮನೀಶ್, ಭರತ್, ರೂಪೇಶ್ ಸೇರಿದಂತೆ ಸುಮಾರು 25ಕ್ಕೂ ಅಧಿಕ ಮಂದಿಯ ತಂಡ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಮುಸ್ತಫಾ ಅವರು ತಿಳಿಸಿದ್ದಾರೆ.

ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ದಿನೇಶ್ ಅವರು ನಾನು ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆಯಲ್ಲಿ ಸೈದು ಮತ್ತು ನನಗೆ ಮಾತಿಗೆ ಮಾತು ಬೆಳೆದಿದ್ದು, ಅದು ಅಲ್ಲಿಯೇ ರಾಜಿಯಲ್ಲಿ ಇತ್ಯರ್ಥವಾಗಿತ್ತು. ಆದರೆ ರಾತ್ರಿ ನಾನು ಅಂಗಡಿ ಬಳಿ ಹೋಗಿದ್ದ ವೇಳೆಯಲ್ಲಿ ಜಾಬಿರ್ ಸೇರಿದಂತೆ ಸುಮಾರು 30 ಮಂದಿಯ ತಂಡ ನನಗೆ ಮತ್ತು ಯೋಗಿಶ್ ಎಂಬವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News