ಫ್ರಾನ್ಸ್ ನೀರ್ಗಲ್ಲ ನದಿಯಲ್ಲಿ 1966ರ ಭಾರತೀಯ ಪತ್ರಿಕೆಗಳು ಪತ್ತೆ!

Update: 2020-07-14 15:09 GMT

ಲಂಡನ್, ಜು. 14: ಏರ್ ಇಂಡಿಯಾ ವಿಮಾನವೊಂದು 54 ವರ್ಷಗಳ ಹಿಂದೆ ಪತನಗೊಂಡ ಪಶ್ಚಿಮ ಯುರೋಪ್ ನ ಮೋಂಟ್ ಬ್ಲಾಕ್ ಪರ್ವತ ಶ್ರೇಣಿಯಲ್ಲಿರುವ ಫ್ರಾನ್ಸ್ ಗೆ ಸೇರಿದ ಬೋಸನ್ಸ್ ಎಂಬ ಕರಗುತ್ತಿರುವ ನೀರ್ಗಲ್ಲ ನದಿಯಲ್ಲಿ ಭಾರತೀಯ ಪತ್ರಿಕೆಗಳು ಪತ್ತೆಯಾಗಿವೆ.

ಇಂಥ ಒಂದು ಪತ್ರಿಕೆಯು ‘‘ಭಾರತದ ಪ್ರಥಮ ಮಹಿಳಾ ಪ್ರಧಾನಿ’’ ಎಂಬ ಶೀರ್ಷಿಕೆಯಲ್ಲಿ 1966ರಲ್ಲಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಜಯಗಳಿಸಿದ ಸುದ್ದಿಯನ್ನು ಹೊಂದಿದೆ.

ಈ ಪತ್ರಿಕೆಗಳು 1966 ಜನವರಿ 24ರಂದು ಯುರೋಪ್ ನ ಅತ್ಯುನ್ನತ ಪರ್ವತ ಶ್ರೇಣಿಗೆ ಅಪ್ಪಳಿಸಿದ ಏರ್ ಇಂಡಿಯಾ ವಿಮಾನದ ಅವಶೇಷಗಳಾಗಿವೆ. ಫ್ರಾನ್ಸ್ ನ ಚಾಮೊನಿಕ್ಸ್ ರಿಸಾರ್ಟ್ಗಿಂತ 1,350 ಮೀಟರ್ ಎತ್ತರದಲ್ಲಿ ಕೆಫೆ ರೆಸ್ಟೋರೆಂಟೊಂದನ್ನು ನಡೆಸುತ್ತಿರುವ ತಿಮೋತೀ ಮೋಟಿನ್ ಎಂಬವರಿಗೆ ಈ ಪತ್ರಿಕೆಗಳು ಸಿಕ್ಕಿವೆ.

‘‘ಪತ್ರಿಕೆಗಳು ಈಗ ಒಣಗುತ್ತಿವೆ. ಆದರೂ ಅವುಗಳು ಉತ್ತಮ ಸ್ಥಿತಿಯಲ್ಲಿವೆ. ಅವುಗಳನ್ನು ಓದಬಹುದು’’ ಎಂದು 33 ವರ್ಷದ ಮೋಟಿನ್ ಸ್ಥಳೀಯ ಫ್ರೆಂಚ್ ದೈನಿಕ ‘ಲೆ ಡಾಪೈನ್ ಲೈಬರ್’ಗೆ ಹೇಳಿದ್ದಾರೆ ಎಂದು ಬ್ರಿಟನ್ ನ ‘ದ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.

‘‘ಇದೇನೂ ಆಶ್ಚರ್ಯವಲ್ಲ. ನಾವು ಪ್ರತಿ ಸಲ ಆ ನೀರ್ಗಲ್ಲ ಮೇಲೆ ಸ್ನೇಹಿತರೊಂದಿಗೆ ನಡೆಯುತ್ತಿರುವಾಗಿ ಅಲ್ಲಿ ವಿಮಾನ ಪತನದ ಅವಶೇಷಗಳು ಸಿಗುತ್ತವೆ. ಅನುಭವದಿಂದ ಅವು ಎಲ್ಲಿವೆ ಎಂದು ಹೇಳಬಹುದಾಗಿದೆ. ಈಗ ಅಂಥ ಅವಶೇಷಗಳನ್ನು ಅವುಗಳ ಗಾತ್ರಗಳಿಗನುಸಾರವಾಗಿ ನೀರ್ಗಲ್ಲ ನದಿಯು ಒಯ್ಯುತ್ತಿದೆ’’ ಎಂದು ಅವರು ಹೇಳಿದರು.

ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಿಂದ ತಪ್ಪು ಸಂದೇಶಗಳು ಬಂದ ಬಳಿಕ, ಏರ್ ಇಂಡಿಯಾಕ್ಕೆ ಸೇರಿದ ಬೋಯಿಂಗ್ 707 ವಿಮಾನವು ಪರ್ವತಕ್ಕೆ ಢಿಕ್ಕಿ ಹೊಡೆದಿತ್ತು. ಅದರಲ್ಲಿದ್ದ ಎಲ್ಲ 177 ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮೋಟಿನ್ರಿಗೆ ಸಿಕ್ಕಿರುವ 10ಕ್ಕೂ ಅಧಿಕ ಪತ್ರಿಕೆಗಳ ಪೈಕಿ ‘ನ್ಯಾಶನಲ್ ಹೆರಾಲ್ಡ್’ ಮತ್ತು ‘ಎಕನಾಮಿಕ್ ಟೈಮ್ಸ್’ನ ಪ್ರತಿಗಳೂ ಇವೆ. ಐದು ದಶಕಗಳಿಗೂ ಅಧಿಕ ಕಾಲ ಪತ್ರಿಕೆಗಳನ್ನು ಆವರಿಸಿದ್ದ ಮಂಜುಗಡ್ಡೆಯು ಇತ್ತೀಚೆಗೆ ಕರಗಲು ಆರಂಭಿಸಿರುವುದರಿಂದ ಪತ್ರಿಕೆಗಳು ಹೊರಗೆ ಗೋಚರಿಸಿವೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News