ಬಜಿಲಕೇರಿ ಹೊಡೆದಾಟ ಪ್ರಕರಣ: 11 ಆರೋಪಿಗಳ ಸೆರೆ

Update: 2020-07-14 15:43 GMT

ಮಂಗಳೂರು, ಜು.14: ನಗರದ ಬಜಿಲಕೇರಿಯಲ್ಲಿ ಸೋಮವಾರ ತಡರಾತ್ರಿ ಎರಡು ತಂಡಗಳ ನಡುವಿನ ಹೊಡೆದಾಟದಲ್ಲಿ ನಾಲ್ವರು ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿ 11 ಮಂದಿಯನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.

ಬಜಿಲಕೇರಿ ಪರಿಸರದ ನಿವಾಸಿಗಳಾದ ಅಬ್ದುಲ್ ರಶೀದ್, ಅಜಯ್ ಪ್ರಸಾದ್, ವಿಜಯ್ ಪ್ರಸಾದ್, ಗುರುರಾಜ್ ಗಾಯಗೊಂಡವರು. ರಶೀದ್ ಅವರಿಗೆ ಸ್ವಲ್ಪ ಗಂಭೀರ ಪ್ರಮಾಣದ ಗಾಯವಾಗಿದ್ದು, ಎಲ್ಲರೂ ಚಿಕಿತ್ಸೆಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಂಧಲೆಯಿಂದ ಕಾರು, ದ್ವಿಚಕ್ರ ವಾಹನಗಳಿಗೆ ಹಾಗೂ ಮನೆಯ ಕಿಟಕಿ ಬಾಗಿಲಿನ ಗಾಜಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಬಜಿಲಕೇರಿ ಪ್ರದೇಶಕ್ಕೆ ರಶೀದ್ ಮತ್ತು ಆತನ ಸ್ನೇಹಿತರು ಪ್ರವೇಶಿಸಬಾರದೆಂದು ಅಜಯ್ ಮತ್ತಿತರರು ತಗಾದೆ ತೆಗೆದಿದ್ದರು. ಇದೇ ವೈಷಮ್ಯಕ್ಕೆ ಸಂಬಂಧಿಸಿ ರಶೀದ್ ಮತ್ತು ತಂಡ ಸೋಮವಾರ ರಾತ್ರಿ ವೇಳೆ ಬಜಿಲಕೇರಿ ಪ್ರದೇಶಕ್ಕೆ ಬಂದು ಅಜಯ್ ಪ್ರಸಾದ್ ಮತ್ತಿತರರನ್ನು ಪ್ರಶ್ನಿಸಿದೆ. ಈ ಸಂದರ್ಭ ಎರಡೂ ತಂಡಗಳ ಮಧ್ಯೆ ಮಾರಾಮಾರಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

11 ಮಂದಿ ಬಂಧನ: ಘಟನೆಗೆ ಸಂಬಂಧಿಸಿ ಬಂದರು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದ್ದು, 11 ಮಂದಿಯನ್ನು ಬಂಧಿಸಲಾಗಿದೆ.

ಒಂದು ಪ್ರಕರಣದಲ್ಲಿ ಅಬ್ದುಲ್ ರಶೀದ್, ಮುಹಮ್ಮದ್ ಹಮೀಝ್, ಜಿಯಾದ್ ಅಯ್ಯುಬ್, ಮುಹಮ್ಮದ್ ಆಶಿಕ್, ಇಮ್ರಾನ್, ನವಾಝ್ ಶರೀಫ್, ಸಫ್ವಾನ್, ಮುಹಮ್ಮದ್ ನವಾಝ್ ಅವರನ್ನು ಬಂಧಿಸಲಾಗಿದೆ. ಪ್ರತಿ ದೂರು ಪ್ರಕರಣದಲ್ಲಿ ಅಜಯ್ ಪ್ರಸಾದ್, ವಿಜಯ್ ಪ್ರಸಾದ್, ಗುರುರಾಜ್ ಎಂಬವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನಿಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಸಕ ಭೇಟಿ: ಬಜಿಲಕೇರಿಯಲ್ಲಿ ನಡೆದ ಹೊಡೆದಾಟದಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಆಯುಕ್ತರನ್ನು ಶಾಸಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News