97 ಲಕ್ಷ ಮಕ್ಕಳಿಗೆ ಇನ್ನೆಂದೂ ಶಾಲೆಗಳಿಗೆ ಹೋಗಲು ಸಾಧ್ಯವಾಗದು: ‘ಸೇವ್ ದ ಚಿಲ್ಡ್ರನ್’ ಎಚ್ಚರಿಕೆ

Update: 2020-07-14 16:28 GMT

ಲಂಡನ್, ಜು. 14: ಕೋವಿಡ್-19 ಸಾಂಕ್ರಾಮಿಕವು ಅಭೂತಪೂರ್ವ ಶಿಕ್ಷಣ ತುರ್ತುಪರಿಸ್ಥಿತಿಯೊಂದನ್ನು ಸೃಷ್ಟಿಸಿದೆ; ಶಾಲೆಗಳು ಮುಚ್ಚಿರುವುದರಿಂದ ಶಾಲೆಗಳಿಗೆ ಹೋಗದೆ ಇರುವ ಸುಮಾರು 97 ಲಕ್ಷ ಮಕ್ಕಳು ಇನ್ನೆಂದೂ ಶಾಲೆಗೆ ಹೋಗಲು ಸಾಧ್ಯವಾಗದಿರುವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಬ್ರಿಟನ್ ನ ಮಕ್ಕಳ ಕಲ್ಯಾಣ ಸಂಸ್ಥೆ ‘ಸೇವ್ ದ ಚಿಲ್ಡ್ರನ್’ ಸೋಮವಾರ ಎಚ್ಚರಿಸಿದೆ.

ಕೊರೋನ ವೈರಸ್ ಸಾಂಕ್ರಾಮಿಕವು ಹರಡುವುದನ್ನು ತಡೆಯುವ ಕ್ರಮವಾಗಿ ಶಾಲೆಗಳನ್ನು ಮುಚ್ಚಿದಾಗ ಎಪ್ರಿಲ್ ನಲ್ಲಿ 160 ಕೋಟಿ ಮಕ್ಕಳು ಶಾಲೆಗಳಿಂದ ಹೊರಗುಳಿದರು. ಇದು ಜಗತ್ತಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯ 90 ಶೇಕಡವಾಗಿದೆ. ‘‘ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ, ಜಾಗತಿಕ ಮಟ್ಟದಲ್ಲಿ ಮಕ್ಕಳ ಇಡೀ ತಲೆಮಾರೊಂದರ ಶಿಕ್ಷಣದಲ್ಲಿ ವ್ಯತ್ಯಯವಾಗಿದೆ’’ ಎಂದು ಸಂಸ್ಥೆಯು ‘ಸೇವ್ ಅವರ್ ಚಿಲ್ಡ್ರನ್’ ಎಂಬ ತಲೆಬರಹದ ತನ್ನ ವರದಿಯಲ್ಲಿ ಹೇಳಿದೆ.

ಈ ಸಾಂಕ್ರಾಮಿಕ ರೋಗವು ಒಡ್ಡಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಇನ್ನೂ 9 ಕೋಟಿಯಿಂದ 11.7 ಕೋಟಿ ಮಕ್ಕಳು ಬಡತನದ ತೆಕ್ಕೆಗೆ ಜಾರಲಿದ್ದಾರೆ ಹಾಗೂ ಇದು ಶಾಲೆಗಳಿಗ ಪ್ರವೇಶ ಪಡೆದುಕೊಳ್ಳುವವರ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಬಡತನದಿಂದಾಗಿ ಹೆಚ್ಚಿನ ಮಕ್ಕಳು ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಒಳಗಾಗಲಿದ್ದಾರೆ ಹಾಗೂ ಬಾಲಕಿಯರನ್ನು ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಮಾಡಿಕೊಡಲಾಗುತ್ತದೆ. ಇದರಿಂದಾಗಿ 97 ಲಕ್ಷ ಮಕ್ಕಳು ಶಾಶ್ವತವಾಗಿ ಶಾಲೆಯಿಂದ ಹೊರಗುಳಿಯಬೇಕಾಗುತ್ತದೆ ಎಂದು ‘ಸೇವ್ ದ ಚಿಲ್ಡ್ರನ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News