ಕೋವಿಡ್-19ಗೆ ಉಡುಪಿ ಜಿಲ್ಲೆಯಲ್ಲಿ ಐದನೇ ಬಲಿ

Update: 2020-07-14 15:56 GMT
ಸಾಂದರ್ಭಿಕ ಚಿತ್ರ

ಉಡುಪಿ/ಪಡುಬಿದ್ರಿ, ಜು.14: ದೇಶಾದ್ಯಂತ ಸಾವಿನ ಅಲೆಯನ್ನೇ ಎಬ್ಬಿಸಿರುವ ನೋವೆಲ್ ಕೊರೋನ ವೈರಸ್ (ಕೋವಿಡ್-19) ಉಡುಪಿ ಜಿಲ್ಲೆಯಲ್ಲಿ ಐದನೇ ಬಲಿಯನ್ನು ಪಡೆದಿದೆ. ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಪಡುಬಿದ್ರಿಯ 82 ವರ್ಷ ಪ್ರಾಯದ ವೃದ್ಧರೊಬ್ಬರು ನಿನ್ನೆ ಸಂಜೆ ಮೃತಪಟ್ಟಿದ್ದು, ಅವರ ಗಂಟಲು ದ್ರವ ಮಾದರಿ ಪರೀಕ್ಷೆ ಕೋವಿಡ್‌ಗೆ ಪಾಸಿಟಿವ್ ಫಲಿತಾಂಶವನ್ನು ನೀಡಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧರನ್ನು ಪಡುಬಿದ್ರಿಯ ಖಾಸಗಿ ನರ್ಸಿಂಗ್ ಹೋಮ್‌ಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಆದರೆ ಅವರ ದೈಹಿಕ ಸ್ಥಿತಿಯನ್ನು ಗಮನಿಸಿ, ಉಡುಪಿಯ ಖಾಸಗಿ ಆಸ್ಪತ್ರೆಗೆ ಸೇರಿಸಲು ಸೂಚಿಸಲಾಗಿತ್ತು. ಅದರಂತೆ ನಾಲ್ಕು ದಿನಗಳ ಹಿಂದೆ ಅವರನ್ನು ಇಲ್ಲಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಉಸಿರಾಟದ ತೊಂದರೆಯಿದ್ದ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ಫಲಿತಾಂಶ ನಿನ್ನೆ ಸಂಜೆ ಬಂದಿದ್ದು, ಕೆಲವೇ ಹೊತ್ತಿನಲ್ಲಿ ಅವರು ಮೃತಪಟ್ಟರೆಂದು ತಿಳಿದುಬಂದಿದೆ.

ಮೃತರ ಅಂತ್ಯಕ್ರಿಯೆಯನ್ನು ಇಂದು ಉಡುಪಿಯ ಬೀಡಿನಗುಡ್ಡೆಯಲ್ಲಿ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಯಿತು ಎಂದು ಡಾ.ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News