ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ರಾಜ್ಯ ಸರ್ಕಾರದಿಂದ ಲೂಟಿ: ಕೆ.ಎ. ಸಿದ್ದೀಕ್

Update: 2020-07-14 17:54 GMT

ಪುತ್ತೂರು: ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ರಾಜ್ಯ ಸರ್ಕಾರ ಜನರ ದುಡ್ಡನ್ನು ಲೂಟಿ ಮಾಡುತ್ತಿದ್ದು, ಭ್ರಷ್ಟಾಚಾರದಿಂದ ಜೈಲಿಗೆ ಹೋಗಿ ಮತ್ತೆ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರು ಇದೀಗ ಕೊರೊನದಲ್ಲಿಯೂ ಜನರ ದುಡ್ಡನ್ನು ಕೊಳ್ಳೆ ಹೊಡೆಯವ ಕೆಲಸ ಮಾಡುತ್ತಿದ್ದಾರೆ ಎಂದು ಎಸ್‍ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಎ. ಸಿದ್ದೀಕ್ ಆರೋಪಿಸಿದರು. 

ಅವರು ಮಂಗಳವಾರ ಎಸ್‍ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಇಲ್ಲಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. 
ಕೊರೊನಾ ಪರೀಕ್ಷೆಯಲ್ಲಿಯೂ ಸೇರಿದಂತೆ ಸ್ಯಾನಿಟರೈಸ್, ಥರ್ಮಲ್‍ಸ್ಕಾನರ್‍ಗಳಲ್ಲಿಯೂ ಹಗರಣ ನಡೆದಿದೆ. ಸರ್ಕಾರದ ಭ್ರಷ್ಟತೆಯ ಬಗ್ಗೆ ಯಾವುದೇ ವಿರೋಧ ಪಕ್ಷಗಳು ಮಾತನಾಡುತ್ತಿಲ್ಲ. ಅವರ ಬಾಯಿ ಮುಚ್ಚಿಸಲಾಗುತ್ತಿದೆ. ಆದರೆ ಎಸ್‍ಡಿಪಿಐ ಈ ಬಗ್ಗೆ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು. 

ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಅಬ್ದುಲ್ ಮಜೀದ್‍ಖಾನ್ ಮಾತನಾಡಿ ಕೊರೊನಾದ ವಿಚಾರದಲ್ಲಿ ರಾಜ್ಯ ಸರಕಾರ ಖಾಸಗಿ ಆಸ್ಪತ್ರೆ ಜೊತೆ ಸೇರಿಕೊಂಡು ಹಣ ದೋಚುವ ಕೆಲಸ ಮಡುತ್ತಿದೆ. ಸಾಂಕ್ರಾಮಿಕ ರೋಗದಲ್ಲಿ ಡೆಂಗಿ, ನ್ಯೂಮೊನಿಯ, ಮಲೇರಿಯದಂತಹ ಸಂದರ್ಭದಲ್ಲೂ ರೋಗಿಗೆ ಆಸ್ಪತ್ರೆಯಲ್ಲಿ ಕೊರೋನ ಪರೀಕ್ಷೆ ನಡೆಸುವ ಮೂಲಕ ಒಟ್ಟು ಹಣ ಮಾಡುವ ಉದ್ದೇಶ ಹೊಂದಿದೆ ಎಂದರು. 

ಪಿಎಫ್‍ಐ ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ, ಎಸ್‍ಡಿಟಿಯು ತಾಲೂಕು ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಎಸ್‍ಡಿಪಿಐ ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ನಗರ ಸಮಿತಿ ಅಧ್ಯಕ್ಷ ಬಶೀರ್ ಕೂರ್ನಡ್ಕ, ತಾಲೂಕು ಕಾರ್ಯದರ್ಶಿ ಅಶ್ರಫ್ ಬಾವು, ದಲಿತ್ ಸೇವಾ ಸಮಿತಿ ಮುಖಂಡ ರಾಜು ಹೊಸ್ಮಠ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News