ರಾಜ್ಯ ಸರಕಾರದಿಂದ ಇಮಾಮ್/ಮುಅದ್ಸಿನ್‌ರಿಗೆ ನಿವೃತ್ತಿ ವೇತನ ಯೋಜನೆ: ಮೊದಲ ಕಂತಿನ ಹಣ ಬಿಡುಗಡೆ

Update: 2020-07-16 05:16 GMT

ಮಂಗಳೂರು, ಜು.15: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಗೊಂಡ ಮಸೀದಿಗಳಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟು ಸೇವೆಗೈದು ಕೆಲಸದಿಂದ ನಿವೃತ್ತಿ ಹೊಂದಿ 65 ವರ್ಷ ಪೂರ್ತಿಗೊಳಿಸಿದ ಇಮಾಮ್ ಮತ್ತು ಮುಅದ್ಸಿನ್‌ರಿಗೆ ನಿವೃತ್ತಿ ವೇತನ ಯೋಜನೆಯೊಂದನ್ನು ರಾಜ್ಯ ಸರಕಾರ ರೂಪಿಸಿದೆ.

ಈಗಾಗಲೆ ಮಸೀದಿ-ಮದ್ರಸಗಳಲ್ಲಿ ಸೇವೆ ಸಲ್ಲಿಸುವ ಇಮಾಮ್ ಮತ್ತು ಮುಅದ್ಸಿನ್‌ರಿಗೆ ಮಾಸಿಕ ಗೌರವಧನ ನೀಡಲಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಇದೀಗ ನಿವೃತ್ತಿ ಹೊಂದಿದ ಇಮಾಮ್/ಮುಅದ್ಸಿನ್‌ರಿಗೆ ನಿವೃತ್ತಿ ವೇತನ ಯೋಜನೆಯನ್ನು ರಾಜ್ಯ ವಕ್ಫ್ ಮಂಡಳಿಯ ಮೂಲಕ ಪ್ರಕಟಿಸಿದೆ. ಕೊರೋನ ಸಂಕಷ್ಟ ಕಾಲದಲ್ಲಿ ಈ ವೇತನವು ಇಮಾಮ್/ಮುಅದ್ಸಿನ್‌ರಿಗೆ ವರದಾನವಾಗಲಿದೆ.

ವಕ್ಫ್‌ನಲ್ಲಿ ನೋಂದಣಿಗೊಂಡ ಮಸೀದಿಗಳಲ್ಲಿ ಇಮಾಮ್ ಅಥವಾ ಮುಅದ್ಸಿನ್ ಆಗಿ ಕನಿಷ್ಟ 10 ವರ್ಷ ಸೇವೆ ಸಲ್ಲಿಸಿರಬೇಕು ಮತ್ತು ನಿವೃತ್ತಿ ಹೊಂದಿ 65 ವರ್ಷ ಪ್ರಾಯ ಪೂರ್ತಿಗೊಂಡಿರಬೇಕು. ಅಂತಹವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಗೊಂಡ ಅರ್ಜಿದಾರರ ಪೈಕಿ ಇಮಾಮರಿಗೆ ಮಾಸಿಕ 2,000 ರೂ. ಮತ್ತು ಮುಅದ್ಸಿನ್‌ಗೆ 1,500 ರೂ. ನಿವೃತ್ತಿ ವೇತನ ನೀಡಲಾಗುತ್ತದೆ.

ಇಮಾಮ್-ಖತೀಬ್/ಸಹಾಯಕ ಇಮಾಮ್/ಮುಅಲ್ಲಿಂ/ಸದ್‌ರ್ ಮುಅಲ್ಲಿಂ/ಮುಅದ್ಸಿನ್ ಹೀಗೆ ವಿವಿಧ ಸ್ತರಗಳಲ್ಲಿ ಮಸೀದಿ/ಮದ್ರಸಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೆ ಇಮಾಮ್ ಮತ್ತು ಮುಅದ್ಸಿನ್ ಸಹಿತ 12500ಕ್ಕೂ ಅಧಿಕ ಮಂದಿಗೆ ಮಾಸಿಕ ಗೌರವಧನ ನೀಡುತ್ತಿರುವ ಸರಕಾರ ಇದೀಗ ಹೊಸದಾಗಿ ನಿವೃತ್ತಿ ವೇತನ ಯೋಜನೆಯನ್ನು ಜಾರಿಗೊಳಿಸಿದೆ. ಅಷ್ಟೇ ಅಲ್ಲ, 2020-21ನೆ ಸಾಲಿನಲ್ಲಿ ರಾಜ್ಯದ 10 ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಯಾದಗಿರಿ ಜಿಲ್ಲೆಗಳ 42 ಇಮಾಮ್ ಮತ್ತು 49 ಮುಅದ್ಸಿನ್‌ರಿಗೆ ಕ್ರಮವಾಗಿ 2 ಸಾವಿರ ರೂ. ಮತ್ತು 1,500 ರೂ.ಸಹಿತ ಒಟ್ಟು 1.56 ಲಕ್ಷ ರೂ.ವನ್ನು ಬಿಡುಗಡೆ ಮಾಡಿದೆ. ಆ ಮೂಲಕ ನಿವೃತ್ತಿಯ ಬಳಿಕ ಬೇರೆ ಕೆಲಸ ಮಾಡಲಾಗದ ಇಮಾಮ್/ಮುಅದ್ಸಿನ್‌ರ ಬದುಕಿಗೆ ಇದು ಆಸರೆಯಾಗಲಿದೆ.

ಸೇವೆಯಲ್ಲಿರುವ ಇಮಾಮ್/ಮುಅದ್ಸಿನ್‌ರಿಗೆ ಈಗಾಗಲೆ ಗೌರವಧನ ನೀಡಲಾಗುತ್ತದೆ. ನಿವೃತ್ತಿಯ ಬಳಿಕ ಇಮಾಮ್/ಮುಅದ್ಸಿನ್‌ರಿಗೆ ಬೇರೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿವೃತ್ತಿ ಯೋಜನೆ ರೂಪಿಸಲಾಗಿದೆ. ಇದೊಂದು ಹೊಸ ಯೋಜನೆಯಾಗಿದೆ. ಇದರ ಯಶಸ್ಸಿಗೆ ಎಲ್ಲರ ಸಹಕಾರ ಅತ್ಯಗತ್ಯ. ಇನ್ನು ಮುಅಲ್ಲಿಂ ಮತ್ತು ಸದ್‌ರ್ ಮುಅಲ್ಲಿಮರಿಗೆ ಗೌರವಧನ ನೀಡುವ ಪ್ರಸ್ತಾವನೆ ಇದೆ. ಅದನ್ನು ಜಾರಿಗೊಳಿಸಲು ಪ್ರಯತ್ನಿಸಲಾಗುವುದು.

ಮೌಲಾನ ಶಾಫಿ ಸಅದಿ ಬೆಂಗಳೂರು, ರಾಜ್ಯ ವಕ್ಫ್ ಮಂಡಳಿಯ ಸದಸ್ಯ

ಹೇಗೆ ಅರ್ಜಿ ಸಲ್ಲಿಸಬಹುದು?

ಈ ಅರ್ಹತೆಯುಳ್ಳ ಇಮಾಮ್/ಮುಅದ್ಸಿನ್‌ರು ಅರ್ಜಿ ನಮೂನೆಯನ್ನು ಆಯಾ ಜಿಲ್ಲಾ ವಕ್ಫ್ ಕಚೇರಿಯಿಂದ ಪಡೆದುಕೊಂಡು ಆಧಾರ್ ಕಾರ್ಡ್‌ನ ನಕಲು ಪ್ರತಿ, ಅರ್ಜಿದಾರರ ಸೇವಾ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಆದಾಯ ದೃಢೀಕರಣ ಪತ್ರ ಅಥವಾ ಬಿಪಿಎಲ್ ಕಾರ್ಡ್‌ನ ಪ್ರತಿ, ವಿದ್ಯಾಭ್ಯಾಸದ ಬಗ್ಗೆ ದೃಢೀಕರಣ ಪತ್ರ (ಧಾರ್ಮಿಕ ಮತ್ತು ಲೌಕಿಕ) ಇತ್ಯಾದಿ ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿ ಆಯಾ ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News