ಉಡುಪಿ: ಕೆಥೊಲಿಕ್ ಸಭಾದಿಂದ ಪಾಳು ಬಿದ್ದ 10 ಎಕ್ರೆ ಭೂಮಿಯಲ್ಲಿ ಕೃಷಿ

Update: 2020-07-15 11:57 GMT

ಉಡುಪಿ, ಜು.15: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಕಲ್ಯಾಣಪುರ ವಲಯ ಸಮಿತಿಯು ಇತರ ಸಹಭಾಗಿ ಸಂಘಟನೆಗಳೊಂದಿಗೆ ಸೇರಿಕೊಂಡು ಕ್ರೈಸ್ತರ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ನೀಡಿದ ಪರಿಸರ ಪ್ರೀತಿಯ ಸಂದೇಶವನ್ನು ಪಾಲಿಸುವುದರೊಂದಿಗೆ ಪಾಳು ಬಿದ್ದ ಸುಮಾರು 10 ಎಕ್ರೆ ಭೂಮಿಯಲ್ಲಿ ನಾಟಿ ಮಾಡುವುದರ ಮೂಲಕ ಕೃಷಿ ಕಾರ್ಯಕ್ಕೆ ಕೈ ಹಾಕಿದೆ.

ಮಂಗಳವಾರ ಅಂಬಾಗಿಲು ಸಮೀಪದ ಕಕ್ಕುಂಜೆಯಲ್ಲಿ ಪಾಳು ಬಿದ್ದಿರುವ ಸುಮಾರು 10 ಎಕ್ರೆ ಪಾಳು ಭೂಮಿಯಲ್ಲಿ ಕಲ್ಯಾಣಪುರ ವಲಯದ ಸದಸ್ಯರು ಹಾಗೂ ಇತರರು ಸೇರಿಕೊಂಡು ನೇಜಿ ನೆಡುವ ಕಾರ್ಯಕ್ಕೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ನೇಜಿ ನೆಡುವುದರ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಇಂದು ದೇಶ ಕೋವಿಡ್ -19 ಸಮಸ್ಯೆ ಎದುರಿಸುತ್ತಿರುವ ವೇಳೆ ಮತ್ತೆ ಕೃಷಿ ನಮ್ಮನ್ನು ವಾಪಾಸು ಕರೆಯುತ್ತಿದೆ. ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದ ಹಲವರು ಉದ್ಯೋಗ ಕಳೆದುಕೊಂಡು ವಾಪಾಸು ಬಂದಾಗ ಮತ್ತೆ ಕೃಷಿಯತ್ತ ಒಲವು ತೋರಲು ಸಾಧ್ಯವಾಗಿದೆ. ಕೃಷಿಯನ್ನು ನಿರ್ಲಕ್ಷ್ಯ ಮಾಡದೇ ಹಡಿಲು ಇರುವ ಜಾಗದಲ್ಲಿ ಮತ್ತೆ ಕೃಷಿಯನ್ನು ಮಾಡುವುದರ ಮೂಲಕ ನಮ್ಮ ಆಹಾರದ ಭದ್ರತೆಯನ್ನು ನಾವೇ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭ ಕಲ್ಯಾಣಪುರ ವಲಯದ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಕಾರ್ಯದರ್ಶಿ ರೋಸಿ ಕ್ವಾಡ್ರಸ್, ನಿಯೋಜಿತ ಅಧ್ಯಕ್ಷೆ ರೋಜಿ ಬಾರೆಟ್ಟೊ, ಕೋಶಾಧಿಕಾರಿ ಫೆಲಿಕ್ಸ್ ಪಿಂಟೊ, ಸಹ ಕೋಶಾಧಿಕಾರಿ ಉರ್ಬಾನ್ ಲೂವಿಸ್, ಕೇಂದ್ರಿಯ ಸಮಿತಿಯ ಮಾಜಿ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News