ಕೋವಿಡ್-19 ಖರೀದಿ ಅವ್ಯವಹಾರ ಆರೋಪ: ಜಂಟಿ ಸದನ ಸಮಿತಿ ಮೂಲಕ ತನಿಖೆ ನಡೆಯಲಿ; ಯು.ಟಿ.ಖಾದರ್

Update: 2020-07-15 12:39 GMT

ಮಂಗಳೂರು,ಜು.15: ಕೋವಿಡ್-19 ತಡೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮಾಸ್ಕ್ ಮತ್ತು ಇತರ ಖರೀದಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಂಟಿ ಸದನ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸುದ್ದಿಗೊಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.

ಕೋವಿಡ್-19 ಪ್ರಕರಣದ ತಡೆಗೆ ಬಳಸುವ ಸುರಕ್ಷತಾ ಸಾಧನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪದ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಮಾರುಕಟ್ಟೆಯ ದರ ಹಾಗೂ ಖರೀಸಿದ ಸಾಮಾಗ್ರಿಯ ದರದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಈ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ಕೋವಿಡ್-19 ಸಂಕಷ್ಟದ ಪರಿಸ್ಥಿತಿಯಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ನೌಕರರಿಗೆ ನೆರವು ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಉದ್ಯೋಗ ನೀಡಬೇಕು. ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗ್ಗೆಯೂ ಸರಕಾರ ಗಮನಹರಿಸಬೇಕು ಎಂದು ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ಸದನದ ಗಮನಕ್ಕೆ ತಾರದೆ ಎಪಿಎಂ, ಭೂಸುಧಾರಣಾ ಕಾಯಿದೆ, ಕಾರ್ಮಿಕ ಕಾಯಿದೆಗೆ ತಿದ್ದುಪಡಿ ನಿರ್ಧಾರ ಸರಕಾರದ ಸರಿಯಾದ ನಡೆಯಲ್ಲ. ಇದು ಬಂಡವಾಳ ಶಾಹಿಗಳನ್ನು ಬೆಂಬಲಿಸುವ, ಉಳ್ಳವರನ್ನು ಹೊಲದೊಡೆಯರನ್ನಾಗಿ ಮಾಡುವ ಕ್ರಮವಾಗಿದೆ. ಇದರಿಂದ ಜನಸಾಮಾನ್ಯರು ಭೂಮಿ ಕಳೆದುಕೊಂಡು ಮತ್ತಷ್ಟು ಬಡವರಾಗಬಹುದು. ಜೀತದಾಳುಗಳಂತೆ ಬದುಕುವ ದಿನಗಳು ಬರಬಹುದು ಎಂದು ಖಾದರ್ ಟೀಕಿಸಿದ್ದಾರೆ.

‘ಆಧಾರ್ ಕಾರ್ಡ್ ಬಳಸಿ ಉಚಿತ ಚಿಕಿತ್ಸೆ’ ಬಗ್ಗೆ ಗೊಂದಲ-ಜಿಲ್ಲಾಡಳಿತ ಸ್ಪಷ್ಟನೆ ನೀಡಲಿ: ಆಧಾರ್ ಕಾರ್ಡ್ ಬಳಸಿ ಉಚಿತ ಚಿಕಿತ್ಸೆಯನ್ನು ವೈದ್ಯಕೀಯ ಕಾಲೇಜು ಹೊಂದಿರುವ ಆಸ್ಪತ್ರೆಗಳಲ್ಲಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಯಿಂದ ಗೊಂದಲ ಉಂಟಾಗಿದೆ. ಆಧಾರ್ ಕಾರ್ಡ್ ಇದ್ದರೆ ಸಾಕು ಎಂದು ಕೆಲವರು ಚಿಕಿತ್ಸೆಗೆ ಹೋದರೆ ಅವರಿಗೆ ಆಸ್ಪತ್ರೆಗಳಲ್ಲಿ 4 ಸಾವಿರ 5 ಸಾವಿರ ಬಿಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟನೆ ನೀಡಬೇಕು. ಸರಕಾರದ ಯಾವೂದಾದರು ದಾಖಲೆ ಇರುವವರಿಗೂ ಈ ಚಿಕಿತ್ಸೆಗೆ ಅವಕಾಶ ನೀಡಬೇಕು ಮತ್ತು ಗೊಂದಲ ನಿವಾರಣೆ ಮಾಡಬೇಕು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಜಬ್ಬಾರ್, ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News