ಭಟ್ಕಳದ ಪ್ರಧಾನ ಖಾಝಿ ಮೌಲಾನ ಮುಲ್ಲಾ ಇಕ್ಬಾಲ್ ನದ್ವಿ ನಿಧನ

Update: 2020-07-15 13:52 GMT

ಭಟ್ಕಳ: ಶಾಫಿ ಕರ್ಮಶಾಸ್ತ್ರದಲ್ಲಿ ಪಾಂಡಿತ್ಯ ಗಳಿಸಿದ್ದ ದಕ್ಷಿಣ ಭಾರತದ ಪ್ರಮುಖ ವಿದ್ವಾಂಸರಲ್ಲೋರ್ವರಾಗಿರುವ ಭಟ್ಕಳ ಜಮಾಅತುಲ್ ಮುಸ್ಲಿಮೀನ್ ನ ಪ್ರಧಾನ ಖಾಝಿ ಮೌಲಾನ ಮುಲ್ಲಾ ಇಕ್ಬಾಲ್ ನದ್ವಿ(75) ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ದೃಢಪಡಿಸಿವೆ. 

ಶಾಫಿ ಕರ್ಮಶಾಸ್ತ್ರದಲ್ಲಿ ಪಾಂಡಿತ್ಯವನ್ನು ಗಳಿಸಿದ್ದ ಇವರು ಆಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷರಾಗಿ, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಬಾಲಕಿಯರಿಗಾಗಿ ಕುರ್ ಆನ್ ಕಂಠಪಾಠ (ಹಿಫ್ಝ್), ತಹಫಿಝುಲ್ ಕುರ್ ಆನ್ ಸಂಸ್ಥೆಯನ್ನು ನಡೆಸುತ್ತಿದ್ದರು. ಮಹಿಳೆಯರ ಶಿಕ್ಷಣ ಸಂಸ್ಥೆಯಾಗಿರುವ ಜಾಮಿಯತುಸ್ಸಾಲಿಹಾತ್ ನಲ್ಲಿಯೂ ಇವರು ಆರಂಭದಿಂದಲೆ ತಮ್ಮನ್ನು ತೊಡಗಿಸಿಕೊಂಡಿದ್ದರು. 
ಭಟ್ಕಳ ಜಮಾಅತುಲ್ ಮುಸ್ಲಿಮೀನ್ ಖಾಝಿ ಮುಹಮ್ಮದ್ ಅಹ್ಮದ್ ಖತೀಬ್ ರವರ ನಿಧನದಿಂದ ತೆರವಾಗಿದ್ದ ‘ಪ್ರಧಾನ ಖಾಝಿ’ ಹುದ್ದೆಗೆ ಮೌಲಾನ ಇಕ್ಬಾಲ್ ನದ್ವಿ  2009ರ ಜುಲೈಯಲ್ಲಿ ನೇಮಕಗೊಂಡಿದ್ದರು. ನಮಾಝ್ ಸಮಯವನ್ನು ತಿಳಿಸುವ ಸಾಫ್ಟ್ ವೇರ್(ತಂತ್ರಾಂಶವನ್ನು) ಇವರು ಅಭಿವೃದ್ಧಿ ಪಡಿಸಿದ್ದರು. ಅಕ್ಷಾಂಶ ಮತ್ತು ರೇಖಾಂಶಗಳ ಕುರಿತಂತೆ ಅಗಾಧ ಜ್ಞಾನವನ್ನು ಹೊಂದಿದ್ದರು. 

1967ರಲ್ಲಿ ಭಟ್ಕಳದ ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದು ನಂತರ ದಾರುಲ್ ಉಲೂಮ್ ನದ್ವತುಲ್ ಉಲೇಮಾದಲ್ಲಿ ಪದವಿ ಗಳಿಸಿದರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ "ಆದಿಬ್ ಕಾಮಿಲ್" ಪದವಿಯನ್ನು ಪಡೆದುಕೊಂಡಿದ್ದಾರೆ. ಭಟ್ಕಳದ ಫಾರೂಖಿ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಇಮಾಮ್ ಆಗಿಯೂ ಕಾರ್ಯನಿರ್ವಹಿಸಿದ ಇವರು ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಧಾರ್ಮಿಕ ಶಿಕ್ಷಣ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ‘ಅಜ್ಕಾರ್-ಎ- ಹಜ್ ಮತ್ತು ಉಮ್ರಾ’, ಹಾಗೂ ‘ತಖ್ರೀಝ್ ವಕ್ತ್ ಸಲಾತ್’ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. 

ಮೊದಲ ಪತ್ನಿ ನಿಧನರಾದ ಬಳಿಕ ಎರಡನೆ ಮದುವೆಯಾದ ಇವರಿಗೆ 10 ಮಂದಿ ಮಕ್ಕಳಿದ್ದಾರೆ.

ಮೌಲಾನ ಮುಲ್ಲಾ ಇಕ್ಬಾಲ್ ನದ್ವಿ ನಿಧನಕ್ಕೆ ತಂಝೀಮ್ ಸಂಸ್ಥೆ, ಅಂಜುಮನ್, ತರಬಿಯತ್ ಎಜ್ಯುಕೇಶನ್ ಸೊಸೈಟಿ, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆ, ಜಮಾಅತೆ ಇಸ್ಲಾಮಿ ಹಿಂದ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಮುಖ್ಯಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News