​‘ಕೊರೋನ ನಿಯಂತ್ರಣಕ್ಕೆ ಕೇರಳ ಮಾದರಿ ಅನುಸರಿಸಿ’

Update: 2020-07-15 13:44 GMT

ಮಂಗಳೂರು, ಜು.15: ರಾಜ್ಯ ಮತ್ತು ಕೇಂದ್ರ ಸರಕಾರವು ಲಾಕ್‌ಡೌನ್ ಹೆಸರಲ್ಲಿ ದಂಧೆ ನಡೆಸುತ್ತಿವೆ. ಈ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ. ಕೇರಳ ಮಾದರಿಯಲ್ಲಿ ಕ್ರಮ ಕೈಗೊಂಡಲ್ಲಿ ಕೊರೋನ ಸೋಂಕು ನಿಯಂತ್ರಿಸಲು ಸಾಧ್ಯ ಎಂದು ಸಿಪಿಐಎಂ ಗುರುಪುರ ವಲಯ ಸಮಿತಿಯ ಅಧ್ಯಕ್ಷ ಸದಾಶಿವ ದಾಸ್ ಆಗ್ರಹಿಸಿದ್ದಾರೆ.

‘ಕೊರೋನ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಹಾರವಲ್ಲ’ ಎಂಬ ಘೋಷಣೆಯೊಂದಿಗೆ ಸಿಪಿಐಎಂ ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಪ್ರತಿಭಟನೆಯ ಅಂಗವಾಗಿ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ಬುಧವಾರ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೊರೋನ ಸೋಂಕು ನಿಯಂತ್ರಿಸಲು ಲಾಕ್‌ಡೌನ್ ಒಂದೇ ಪರಿಹಾರವಲ್ಲ. ಪ್ರಸಕ್ತ ಎಲ್ಲವೂ ಮುಕ್ತವಾಗಿರುವ ಲಾಕ್‌ಡೌನ್ ನಿಯಮ ಅನ್‌ಲಾಕ್‌ಗೆ ಭಿನ್ನವಾಗಿಲ್ಲ ಎಂದರು.

ಸಿಪಿಐಎಂ ಮುಖಂಡ ಗಂಗಯ್ಯ ಅಮೀನ್ ಮಾತನಾಡಿ, ಕೊರೋನ ನಿಯಂತ್ರಣಕ್ಕೆ ಬಿಡುಗಡೆಯಾಗಿರುವ ಕೋಟ್ಯಂತರ ಅನುದಾನ ಎಲ್ಲಿಗೆ ಹೋಗಿದೆ ಎಂಬುದು ಗೊತ್ತಾಗಿಲ್ಲ. ಬಡವರಿಗೆ ಯಾವ ಪರಿಹಾರ ಸಿಕ್ಕಿದೆ ? ಬೀಡಿ ಕಾರ್ಮಿಕರಿಗೆ ಈ ಸರಕಾರಗಳು ನಯಾಪೈಸೆ ಕೂಡ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಕೊರೋನ ಹೆಸರಲ್ಲಿ ಖಾಸಗಿ ಆಸ್ಪತ್ರೆಯವರು ಲೂಟಿ ಮಾಡಿದರೆ, ಸರಕಾರದವು ದಿನಕ್ಕೆ ಎರಡು ಮಾತ್ರೆ ಕೊಟ್ಟು ಸತಾಯಿಸುತ್ತಿದ್ದಾರೆ. ಕಾರ್ಖಾನೆ, ವಾಹನ, ಅಂಗಡಿ-ಮುಂಗಟ್ಟು ತೆರೆದಿಡಲು ಅವಕಾಶವಿರುವುದು ‘ಲಾಕ್‌ಡೌನ್’ ಪದಕ್ಕೆ ಅವಮಾನ ಎಂದರು.

ಸಭೆಯಲ್ಲಿ ಸಿಪಿಐಎಂ ಕಾರ್ಯಕರ್ತರಾದ ವಾರಿಜಾ, ವಸಂತಿ ಕುಪ್ಪೆಪದವು, ಯಶೋದಾ ಮಳಲಿ, ಹೊನ್ನಯ್ಯ ಅಮೀನ್, ಶೇಖರ ಪೂಜಾರಿ, ಬಾಬು ಪೂಜಾರಿ, ಬಾಬು ಸಾಲ್ಯಾನ್ ಮತ್ತಿತರರು ಇದ್ದರು. ಪ್ರತಿಭಟನಾ ಸಭೆಯಲ್ಲಿ ನೋಣಯ್ಯ ಗೌಡ ಸ್ವಾಗತಿಸಿದರು. ಹಸನಬ್ಬ ವಂದಿಸಿದರು.

ತಹರೇವಾರಿ ಪ್ರದರ್ಶನಾ ಫಲಕ: ಮಂಗಳೂರು ನಗರದ ಹೊರವಲಯದ ಗುರುಪುರದ ಕೈಕಂಬ ಜಂಕ್ಷನ್‌ನಲ್ಲಿ ಬುಧವಾರ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ತಹರೇವಾರಿ ಬರಹಗಳನ್ನು ಒಳಗೊಂಡ ಪ್ರದರ್ಶನಾ ಫಲಕಗಳು ರಾರಾಜಿಸಿದವು.
‘ಲಾಕ್‌ಡೌನ್ ಸಂದರ್ಭದಲ್ಲಿ ಜನತೆಗೆ ಆಹಾರ ಸಾಮಗ್ರಿ ಒದಗಿಸಲಿ’, ‘ಕೊರೋನ ಸೋಂಕಿತರಿಗೆ ತಾರತಮ್ಯವಿಲ್ಲದೆ ಚಿಕಿತ್ಸೆ ಸಗುವಂತಾಗಲಿ’, ‘ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ನೇಮಕ ಮಾಡಿ’, ‘ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಿ’, ‘ಆರೋಗ್ಯ ಸಿಬ್ಬಂದಿಗೆ ಸುರಕ್ಷತಾ ಆರೋಗ್ಯ ಕಿಟ್ ಒದಗಿಸಿ’, ‘ಸೀಲ್‌ಡೌನ್ ಪ್ರದೇಶಗಳ ಜನರ ಸಂಕಷ್ಟಗಳಿಗೆ ಸ್ಪಂದಿಸಿ’ ಎನ್ನುವ ಬಗೆಬಗೆಯ ಈ ಮೊದಲಾದ ಪ್ರದರ್ಶನಾ ಫಲಕಗಳು ಸಾರ್ವಜನಿಕರನ್ನು ಆಕರ್ಷಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News