ದ್ವಿತೀಯ ಪಿಯುಸಿ ಪರೀಕ್ಷೆ: ಮಿಯಾರು ಮೊರಾರ್ಜಿ ದೇಸಾಯಿ ಪ.ಪೂ. ವಸತಿ ಕಾಲೇಜು ಸಾಧನೆ

Update: 2020-07-15 13:50 GMT

ಉಡುಪಿ, ಜು.15: ಐದು ವರ್ಷಗಳ ಹಿಂದೆ ಉಡುಪಿಯ ಅಂಬಾಗಿಲಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸೊರಗಿದ್ದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು ಪ್ರಸ್ತುತ ಕಾರ್ಕಳ ತಾಲೂಕಿನ ಮಿಯ್ಯರು ಗ್ರಾಮದಲ್ಲಿ ಸ್ವಂತ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತಿದ್ದು, ಇದೇ ಮೊದಲ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸುವ ಮೂಲಕ ಅಪೂರ್ವ ಸಾಧನೆ ಮಾಡಿದೆ.

ಕಾಲೇಜಿನಿಂದ ಪರೀಕ್ಷೆ ಬರೆದ 56 ವಿದ್ಯಾರ್ಥಿಗಳಲ್ಲಿ 22 ವಿಶಿಷ್ಟ ಶ್ರೇಣಿಯಲ್ಲಿ, 32 ಪ್ರಥಮ ಶ್ರೇಣಿಯಲ್ಲಿ, ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಕಾಲೇಜು ಶೇ.100 ಫಲಿತಾಂಶ ದಾಖಲಿಸಿದೆ.

ಚರಣ್ ಕೆ. ಅವರು 556 (ಶೇ.92.66) ಅಂಕ ಗಳಿಸಿ ಕಾಲೇಜಿನಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಕನ್ನಡ ಭಾಷಾ ವಿಷಯದಲ್ಲಿ ಸುದೀಪ್ ಆಚಾರ್ಯ 100 ಅಂಕ ಹಾಗೂ ಗಣಿತದಲ್ಲಿ ವಿರಾಜ್ 100 ಅಂಕಗಳನ್ನು ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಈಶ್ವರ್ ಎಲ್. ತಿಳಿಸಿದ್ದಾರೆ.

ಪ್ರಾಂಶುಪಾಲರನ್ನು ಒಳಗೊಂಡು 8ಮಂದಿ ಉಪನ್ಯಾಸಕರಿದ್ದು, 10 ಜನ ಭೋದಕೇತರ ಸಿಬ್ಬಂದಿ ಒಳಗೊಂಡಿದೆ. ಕಳೆದ 10 ವರ್ಷಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಫಲಿತಾಂಶ ಪಡೆಯುತಿದ್ದ ಗ್ರಾಮೀಣ ಪ್ರದೇಶದ ಈ ಕಾಲೇಜು ಇದೇ ಮೊದಲ  ಬಾರಿ ಶೇ.100ರ ಫಲಿತಾಂಶ ಪಡೆದಿದೆ.

ಅಟೋಚಾಲಕರ ಮಗ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಈ ಕಾಲೇಜು ಆಧಾರ. ಪ್ರಸ್ತುತ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ 132 ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡುತಿದ್ದು, ಬಹುತೇಕ ಎಲ್ಲ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದವರು. ಪ್ರಥಮ ಸ್ಥಾನ ಗಳಿಸಿದ ಚರಣ್ ಕೆ. ಅವರ ತಂದೆ ಆಟೋ ಚಾಲಕರಾಗಿದ್ದು, ಗುಡಿಸಲು ಮನೆಯಲ್ಲಿ ವಾಸವಾಗಿದ್ದಾರೆ. ಇಲ್ಲಿ ಸಾಧನೆ ಮಾಡಿದ ಹಲವು ವಿದ್ಯಾರ್ಥಿಗಳ ಪೋಷಕರು ದಿನಗೂಲಿ ನೌಕರರಾಗಿದ್ದಾರೆ ಎಂಬುದು ಕಾಲೇಜಿನ ಮಹತ್ವವನ್ನು ಹೇಳುತ್ತದೆ.

ಕಳೆದ 10 ವರ್ಷಗಳಿಂದ ಉತ್ತಮ ಫಲಿತಾಂಶ ಪಡೆಯುತ್ತಾ ಬಂದಿರುವ ಈ ಕಾಲೇಜು, ಪ್ರಸ್ತುತ ಸಾಲಿನಲ್ಲಿ ಶೇ. 100 ಫಲಿತಾಂಶ ದಾಖಲಿಸಿರುವುದು ತುಂಬಾ ಸಂತೋಷದ ವಿಷಯ. ಹಲವು ಖಾಸಗಿ ಸಂಸ್ಥೆಗಳ ಜೊತೆಗೆ ಪೈಪೋಟಿ ನಡೆಸುತ್ತಿರುವುದು ಸಹ ಗಮನಾರ್ಹ ವಿಷಯ. ಇದಕ್ಕಾಗಿ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಮಕ್ಕಳನ್ನು ಅಭಿನಂದಿಸುತ್ತೇನೆ.

 -ಪಿ.ದಯಾನಂದ, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಣಿಪಾಲ

ಈ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ, ಬಹುಪಾಲು ಬಡತನದಲ್ಲಿ ಹುಟ್ಟಿದ ಮಕ್ಕಳ ಹಸಿವು ಈ ಸಾಧನೆಗೈಯಲು ಅನುಕೂಲವಾಯಿತು. ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ನೀಡುವಲ್ಲಿ ಕಾರ್ಯಮಗ್ನರಾಗುತ್ತೇವೆ.

-ಈಶ್ವರ ಎಲ್, ಪ್ರಾಂಶುಪಾಲರು, ಮೊರಾರ್ಜಿ ದೇಸಾಯಿ ಪ.ಪೂರ್ವ ವಸತಿ ಕಾಲೇಜು, ಮಿಯ್ಯಾರು ಕಾರ್ಕಳ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News