ಕಡಿಮೆ ಅವಧಿಯ ಲಾಕ್‌ಡೌನ್‌ನಿಂದ ಪ್ರಯೋಜನವಿಲ್ಲ: ಪಿವಿ ಮೋಹನ್

Update: 2020-07-15 14:30 GMT
ಕೆಪಿಸಿಸಿ ವಕ್ತಾರ ಪಿವಿ ಮೋಹನ್

ಮಂಗಳೂರು, ಜು.15: ದ.ಕ.ಜಿಲ್ಲಾಡಳಿತ ಘೋಷಿಸಿದ ಕಡಿಮೆ ಅವಧಿಯ ಲಾಕ್‌ಡೌನ್‌ನಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಇದರಿಂದ ಕೊರೋನ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಸರಕಾರದ ವೈಫಲ್ಯವನ್ನು ಮರೆಮಾಚಲು ತೇಪೆ ಹಚ್ಚುವ ಕ್ರಮ ಇದಾಗಿದೆ ಎಂದು ಕೆಪಿಸಿಸಿ ವಕ್ತಾರ ಪಿವಿ ಮೋಹನ್ ಆಪಾದಿಸಿದ್ದಾರೆ.

ಜಿಲ್ಲಾದ್ಯಂತ ಕೊರೋನ ವ್ಯಾಪಕವಾಗಿ ಹರಡಿದೆ. ಸಮುದಾಯದಲ್ಲಿ ಪಸರಿಸಿಕೊಂಡಿದೆ. ಇಂತಹ ಆತಂಕದ ಗಂಭೀರ ಪರಿಸ್ಥಿತಿಗೆ ಜಿಲ್ಲೆಯ ಬಿಜೆಪಿಯ ದುರ್ಬಲ ರಾಜಕೀಯ ನಾಯಕತ್ವವೇ ಕಾರಣ ಎಂದಿರುವ ಪಿವಿ ಮೋಹನ್ ಕೊರೋನ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದ ತಕ್ಷಣ ಅದರ ಮೂಲ ಪತ್ತೆ ಹಚ್ಚಬೇಕಿತ್ತು. ಆದರೆ ಜಿಲ್ಲಾಡಳಿತ ಅದರತ್ತ ಹೆಚ್ಚು ಗಮನ ಹರಿಸಿರಲಿಲ್ಲ. ಅಲ್ಲದೆ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಗೂಬೆಕೂರಿಸಿ ಜನರ ಗಮನವನ್ನು ಬೇರೆ ಕಡೆ ಸೆಳೆಯುವ ಪ್ರಯತ್ನ ಮಾಡಿತ್ತು. ಉಸ್ತುವಾರಿ ಸಚಿವರು ಮತ್ತು ಸಂಸದರು ಬಂಟ್ವಾಳದ ಕೊರೋನ ಪ್ರಕರಣದ ಬಗ್ಗೆ ತನಿಖೆಗೆ ಆದೇಶ ನೀಡಿ ಜನರ ಕಣ್ಣು ಒರೆಸುವ ತಂತ್ರ ಮಾಡಿದರು. ಎರಡು ತಿಂಗಳಾದರೂ ಇನ್ನೂ ತನಿಖೆಯು ಪೂರ್ತಿಗೊಂಡಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯ ಸರಕಾರವು ಕೋವಿಡ್ ರೋಗಿಗಳಿಗೆ ಮೀಸಲಾದ ಖಾಸಗಿ ಆಸ್ಪತ್ರೆ ಮತ್ತು ಹೊಟೇಲ್ ಮಾಲಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ದುಬಾರಿ ದರವನ್ನು ನಿಗದಿಪಡಿಸಿದೆ. ಖಾಸಗಿ ಆಸ್ಪತ್ರೆಯ ಜತೆ ಸೇರಿ ಜನತೆಯನ್ನು ಲೂಟಿ ಮಾಡುವುದನ್ನು ನಿಲ್ಲಿಸಬೇಕು ಮತ್ತು ವಿಪತ್ತು ನಿರ್ವಹಣೆಗಾಗಿಟ್ಟ ಹಣವನ್ನು ಖಾಸಗಿ ಆಸ್ಪತ್ರೆ ಮತ್ತು ಹೊಟೇಲ್ ಗಳಲ್ಲಿ ದಾಖಲಾಗಿರುವ ಕೊರೋನ ರೋಗಿಗಳ ಸಂಪೂರ್ಣ ಚಿಕಿತ್ಸಾ ವೆಚ್ಚ ಮತ್ತು ಕ್ವಾರಂಟೈನ್‌ನಲ್ಲಿ ಮೂಲ ಸೌಕರ್ಯಗಳ ಖರ್ಚಿಗಾಗಿ ಬಳಸಬೇಕು. ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News