ದ.ಕ. ಜಿಲ್ಲೆಯಲ್ಲಿ ಕೋವಿಡ್-19‌ಗೆ ನಾಲ್ವರು ಹಿರಿಯರು ಮೃತ್ಯು

Update: 2020-07-15 14:47 GMT

ಮಂಗಳೂರು, ಜು.15: ದ.ಕ. ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಸಾವಿನ ಸರಣಿ ಮುಂದುವರಿದಿದ್ದು, ಮತ್ತೆ ನಾಲ್ವರು ಮೃತಪಟ್ಟಿದ್ದಾರೆ. ಜೊತೆಗೆ, ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಬುಧವಾರ 73 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಬುಧವಾರ ಬಂದ ವರದಿಯಂತೆ ಕೋವಿಡ್‌ನಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಬುಧವಾರ ಮೃತಪಟ್ಟವರಲ್ಲಿ ಮೂವರು ಬಂಟ್ವಾಳ ತಾಲೂಕಿನ ವ್ಯಾಪ್ತಿಯವರಾದರೆ, ಇನ್ನೋರ್ವ ವೃದ್ಧೆ ಸುಳ್ಯ ತಾಲೂಕಿನವರು. ಮೃತಪಟ್ಟ ಎಲ್ಲರೂ 60 ವರ್ಷ ದಾಟಿದವರಾಗಿದ್ದಾರೆ. ಮೃತರು ವಿವಿಧ ರೋಗಳಿಂದ ಬಳಲುತ್ತಿದ್ದರು.

ಬಂಟ್ವಾಳ ಮೂಲದವರಾದ 73 ವರ್ಷದ ವೃದ್ಧ ಅಧಿಕ ರಕ್ತದೊತ್ತಡ, ನ್ಯುಮೋನಿಯ, 70 ವರ್ಷದ ವೃದ್ಧ ಮೂತ್ರಪಿಂಡ ಸಮಸ್ಯೆ, ಹೃದಯಸಂಬಂಧಿ ಕಾಯಿಲೆ, 68 ವರ್ಷದ ವೃದ್ಧೆಯು ಪರಿಧಮನಿ ಕಾಯಿಲೆ (ಸಿಎಡಿ), ಮಧುಮೇಹ, ದೀರ್ಘಕಾಲದ ಶ್ವಾಸಕೋಶ ಸಮಸ್ಯೆ, ಅಧಿಕ ರಕ್ತದೊತ್ತಡ ಹಾಗೂ ಸುಳ್ಯ ಮೂಲದ 60 ವರ್ಷದ ವೃದ್ಧೆಯು ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಮೃತರ ಪೈಕಿ ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿತರೆಲ್ಲ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

73 ಮಂದಿಗೆ ಕೊರೋನ ಸೋಂಕು: ದ.ಕ. ಜಿಲ್ಲೆಯಲ್ಲಿ ಗಣನೀಯವಾಗಿ ಏರಿಕೆ ಕಂಡುಬರುತ್ತಿದ್ದ ಸೋಂಕಿತರ ಸಂಖ್ಯೆಯಲ್ಲಿ ಎರಡು ದಿನಗಳಿಂದ ತಗ್ಗಿದೆ. ಬುಧವಾರ 73 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 2,525ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪೈಕಿ 32 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಪ್ರಾಥಮಿಕ ಸಂಪರ್ಕದಲ್ಲಿದ್ದ 11, ಶೀತ-23, ಎಸ್‌ಎಆರ್‌ಐ (ಉಸಿರಾಟ ತೊಂದರೆ)- ಮೂರು, ವಿದೇಶದಿಂದ ಬಂದಿದ್ದ ಮೂವರು, ಅಂತರ್‌ಜಿಲ್ಲೆಯ ವ್ಯಕ್ತಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರೆಲ್ಲರನ್ನೂ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

104 ಮಂದಿ ಗುಣಮುಖ: ಸಮಾಧಾನಕರ ಸಂಗತಿಯೆಂದರೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕೊರೋನ ಚಿಕಿತ್ಸೆಗೆ ದಾಖಲಾಗಿದ್ದವರಲ್ಲಿ ಬಹುತೇಕ ಮಂದಿ ಗುಣಮುಖರಾಗಿದ್ದಾರೆ. ಬುಧವಾರ ಕೂಡ 104 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 1,089 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ 1,379 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಬಹುತೇಕ ಮಂದಿಯ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News