ಪಡುಬಿದ್ರಿ: ಗಡಿ ಸೀಲ್‌ಡೌನ್‌ಗೆ ಹೆಜಮಾಡಿಯಲ್ಲಿ ಸಿದ್ಧತೆ

Update: 2020-07-15 15:00 GMT

ಪಡುಬಿದ್ರಿ, ಜು.15: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗಡಿಭಾಗ ಹೆಜಮಾಡಿ ಹಾಗೂ ಫಲಿಮಾರಿನಲ್ಲಿ ಬುಧವಾರ ರಾತ್ರಿಯಿಂದ ಸೀಲ್‌ಡೌನ್‌ಗೆ ಸಿದ್ಧತೆಯನ್ನು ನಡೆಸಲಾಗಿದ್ದು, ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಇನ್ನೊಂದು ಗಡಿ ಭಾಗವಾದ ಪಲಿಮಾರು ಕರ್ನಿರೆ ರಸ್ತೆಯನ್ನೂ ಸಹ ಈಗಾಗಲೇ ಮುಚ್ಚಲಾಗಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್, ಹೆಜಮಾಡಿಯಲ್ಲಿ ಚೆಕ್‌ಪೋಸ್ಟ್ ಮೂಲಕ ಜಿಲ್ಲಾ ಗಡಿ ಪ್ರವೇಶಕ್ಕೆ ಇರುವ ನಿರ್ಬಂಧಗಳನ್ನು ಪಾಲಿಸಲು ನಿಗಾ ವಹಿಸಲಾಗುವುದು. ತುರ್ತು ಆರೋಗ್ಯ ಸಂಬಂಧಿ ಸಮಸ್ಯೆಗಾಗಿ ಜಿಲ್ಲೆಗೆ ಆಗಮಿಸುವ ಆ್ಯಂಬುಲೆನ್ಸ್‌ಗಳನ್ನು ಸೂಕ್ತ ದಾಖಲೆಗಳ ಪರಿಶೀಲನೆ ಬಳಿಕ ಒಳಬಿಡಲಾಗುವುದು ಎಂದರು.

ಸರಕಾರಿ ಸ್ವಾಮ್ಯದ ಕಂಪೆನಿಗಳು, ಕೇಂದ್ರ ಸರ್ಕಾರ ಸ್ವಾಮ್ಯದ ಉದ್ದಿಮೆಗಳ ಯಾರಿಗೆ ಆಗಲಿ ಅವರ ಗುರುತು ಚೀಟಿಯನ್ನು ಪರಿಶೀಲಿಸಿ ಪ್ರವೇಶಕ್ಕೆ ಅನುಮತಿ ಇದೆ. ಮಿಕ್ಕಂತೆ ಯಾರಿಗೂ ಪ್ರವೇಶ ಇರುವುದಿಲ್ಲ. ಜನತೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ತಹಶೀಲ್ದಾರ್ ಮನವಿ ಮಾಡಿದರು.

ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳದಲ್ಲಿ ಇದ್ದಾರೆ. ಸಂಜೆಯ ವೇಳೆ ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್, ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಡುಬಿದ್ರಿ ಪಿಎಸ್‌ಐ ದಿಲೀಪ್, ಕಾಪು ಕಂದಾಯ ಪರಿವೀಕ್ಷಕ ರವಿಶಂಕರ್, ಹೆಜಮಾಡಿ ಗ್ರಾಮ ಲೆಕ್ಕಿಗ ಅರುಣಕುಮಾರ್ ಹೆಜಮಾಡಿ ಗಡಿಭಾಗದ ಸೀಲ್‌ಡೌನ್ ಕರ್ತವ್ಯದಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಹೆಚ್ಚುವರಿ ಸಿಬಂದಿಗಳನ್ನು ಸಹ ನೇಮಿಸಿಕೊಳ್ಳಲಾಗಿದೆ.

ಪಡುಬಿದ್ರಿ 5 ಪಾಸಿಟಿವ್: ಪಡುಬಿದ್ರಿ ವ್ಯಾಪ್ತಿಯಲ್ಲಿ ಕೊರೋನ ಪರೀಕ್ಷೆ ವೇಳೆ 5 ಪಾಸಿಟಿವ್ ಪತ್ತೆಯಾಗಿವೆ. ಹೆಜಮಾಡಿ ಗುಂಡಿಯ 50 ವರ್ಷದ ಮಹಿಳೆ, ಹೆಜಮಾಡಿ ಕೋಡಿಯ 47 ವರ್ಷದ ಪುರುಷ, ನಡ್ಸಾಲು ಬೀಡು ಬಳಿಯ 27 ವರ್ಷದ ಪುರುಷ, ಪಡುಬಿದ್ರಿ ಗುಡ್ಡೆ ಗಣಪತಿ ದೇವಳ ಸಮೀಪದ 25 ಮತ್ತು 48 ವರ್ಷಗಳ ಪುರುಷರಲ್ಲಿ ಬುಧವಾರ ಕೊರೊನಾ ಸೋಂಕು ದೃಡಪಟ್ಟಿದೆ. ಹೆಜಮಾಡಿ ಗುಂಡಿ ಬಳಿ 18 ವರ್ಷದ ಯುವತಿಗೆ ಪಾಸಿಟಿವ್ ಬಂದ ಬಳಿಕ ಮನೆ ಸುತ್ತ ರ್ಯಾಂಡಮ್ ಪರೀಕ್ಷೆ ನಡೆಸಿದ ಸಂದರ್ಭ ಮನೆ ಪಕ್ಕದ 50 ವರ್ಷದ ಮಹಿಳೆಯಲ್ಲಿ ಸಹ ಸೋಂಕು ಪತ್ತೆಯಾಗಿದೆ.

ಅವರನ್ನೆಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸುವ ಮತ್ತು ಮನೆ ಸೀಲ್‌ಡೌನ್ ಮಾಡುವ ಪ್ರಕ್ರಿಯೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News