ದ.ಕ. ಜಿಲ್ಲೆಯಲ್ಲಿ ಲಾಕ್‌ಡೌನ್ ಆರಂಭ

Update: 2020-07-15 15:28 GMT
ಫೈಲ್ ಚಿತ್ರ

ಮಂಗಳೂರು, ಜು.15: ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಬುಧವಾರ ರಾತ್ರಿ 8 ಗಂಟೆಯಿಂದ ಲಾಕ್‌ಡೌನ್ ಆರಂಭಗೊಂಡಿದ್ದು, ಒಂದು ವಾರಗಳ ಕಾಲ ಮುಂದುವರಿಯಲಿದೆ.

ಈ ಮಧ್ಯೆ ಬಸ್‌ಗಳ ಓಡಾಟಕ್ಕೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ಒಂದು ವಾರಗಳ ಕಾಲ ಖಾಸಗಿ ಬಸ್ ಸಂಚಾರವೂ ಇರುವುದಿಲ್ಲ ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

ಖಾಸಗಿ ಬಸ್‌ಗಳಲ್ಲದೆ ಸರಕಾರಿ ಬಸ್‌ಗಳು ಹಾಗೂ ಖಾಸಗಿ ವಾಹನಗಳಲ್ಲಿ ಸಂಚಾರವನ್ನು ತುರ್ತು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ನಿಷೇಧಿಸಲಾಗಿದೆ. ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು ಮುಚ್ಚಲಿದ್ದು, ಕಂಟೈನ್ಮೆಂಟ್ ವಲಯಗಳು ಸಂಪೂರ್ಣ ಬಂದ್‌ ಆಗಿರುತ್ತದೆ. ಬಾರ್, ಮಾಲ್‌ಗಳು, ವೈನ್‌ಶಾಪ್‌ಗಳು ಸಂಪೂರ್ಣ ಬಂದ್ ಆಗಿದ್ದು, ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳೂ ಬಂದ್ ಆಗಿರುತ್ತವೆ.

ಜಿಮ್ನೇಶಿಯಂಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳು, ಈಜುಕೊಳಗಳು, ಮನರಂಜನಾ ಉದ್ಯಾನವನಗಳು, ರಂಗಮಂದಿರಗಳು, ಬಾರ್‌ಗಳು ಹಾಗೂ ಆಡಿಟೋರಿಯಂಗಳು, ಸಭಾ ಭವನಗಳು, ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳು, ಸಭೆಗಳು ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.

ಬೆಳಗ್ಗೆ 8ರಿಂದ ಮಧ್ಯಾಹ್ನ 11ರವರೆಗೆ ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು ಸೇರಿದಂತೆ ಆಹಾರ, ಧವಸ ಧಾನ್ಯಗಳು, ಹಣ್ಣು ತರಕಾರಿ, ಮಾಂಸದ ಅಂಗಡಿಗಳಲ್ಲಿ ಖರೀದಿಗೆ ವಿನಾಯಿತಿ ಇದೆ. ಈ ಎಲ್ಲಾ ಕಾರ್ಯಗಳನ್ನು ಕೋವಿಡ್ 19 ನಿರ್ವಹಣೆಗಾಗಿರುವ ನಿಯಗಳನ್ನು ಅನುಸರಿಸಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News