ಕಾರ್ಕಳ ಶಾಸಕರಿಂದ ಸಿಮೆಂಟ್ ಕಿಕ್‌ ಬ್ಯಾಕ್ ಆರೋಪ: ತನಿಖೆ ನಡೆಸುವಂತೆ ಕಾರ್ಕಳ ಯುವ ಕಾಂಗ್ರೆಸ್ ಒತ್ತಾಯ

Update: 2020-07-15 15:25 GMT

ಉಡುಪಿ, ಜು.15: ಕಾರ್ಕಳ ಶಾಸಕ ಸುನೀಲ್ ಕುಮಾರ್ ತನ್ನ ನೂತನ ಖಾಸಗಿ ಕಚೇರಿ ಕಟ್ಟಡಕ್ಕೆ ಸರಕಾರಿ ಕಾಮಗಾರಿಗೆ ಬಳಸುವ ಸಿಮೆಂಟ್ ಉಪಯೋಗಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳು ಕೇಳಿ ಬರುತ್ತಿವೆ. ಈ ಆರೋಪದ ಕುರಿತು ಸೂಕ್ತ ತನಿಖೆ ನಡೆಸುವಂತೆ ಕಾರ್ಕಳ ಪುರಸಭಾ ಕಾಂಗ್ರೆಸ್ ಸದಸ್ಯ ಶುಭದ್ ರಾವ್ ಸರಕಾರವನ್ನು ಒತ್ತಾಯಿಸಿದ್ದಾರೆ.

‘ಸರಕಾರದ ಸಿಮೆಂಟ್ ಶಾಸಕರಿಗೆ ಹೇಗೆ ಸಿಗುತ್ತಿದೆ ಎಂಬುದೇ ಆಶ್ಚರ್ಯ. ಕಾರ್ಕಳ ಕ್ಷೇತ್ರಕ್ಕೆ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ಹೇಳುವ ಶಾಸಕರು, ಈ ಸಿಮೆಂಟ್‌ಗಳು ಯಾವ ಕಾಮಗಾರಿಯ ಕಿಕ್ ಬ್ಯಾಕ್ ಎಂಬುದನ್ನು ಹೇಳಬೇಕು. ಒಂದು ವೇಳೆ ಸರಕಾರದ ಸಬ್ಸಿಡಿಯ ಸಿಮೆಂಟ್‌ಗಳು ಶಾಸಕರಿಗೆ ಸುಲಭವಾಗಿ ಸಿಗುವುದಾದರೆ ಜನಸಾಮಾನ್ಯರಿಗೆ ಯಾಕೆ ಸಿಗುತ್ತಿಲ್ಲ’ ಎಂದು ಶುಭದ್ ರಾವ್ ಪ್ರಶ್ನಿಸಿದ್ದಾರೆ.

ಈ ಮೂಲಕ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿರುವುದು ಕಂಡುಬರುತ್ತದೆ. ಯಾವ ಕಾಮಗಾರಿಯಿಂದ ಈ ಸಿಮೆಂಟ್‌ಗಳನ್ನು ಇಲ್ಲಿ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಶಾಸಕರು ಸ್ಪಷ್ಟನೆ ಕೊಡಬೇಕು. ಈ ಕುರಿತು ಉನ್ನತಮಟ್ಟದ ತನಿಖೆ ನಡೆಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಮತ್ತು ಲೋಕಾಯುಕ್ತಕ್ಕೆ ಕಾರ್ಕಳ ಯುವ ಕಾಂಗ್ರೆಸ್ ವತಿಯಿಂದ ದೂರು ನೀಡಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News