ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೊರೋನ ಆತಂಕ: ಇಬ್ಬರು ವೈದ್ಯರು, ಮೂವರು ಸಿಬ್ಬಂದಿಗಳಲ್ಲಿ ಸೋಂಕು ದೃಢ

Update: 2020-07-15 16:41 GMT

ಉಡುಪಿ, ಜು.15: ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಕೊರೋನ ವೈರಸ್ ವ್ಯಾಪಕವಾಗಿ ಹರಡಿರುವ ಭೀತಿ ತಲೆದೋರಿದ್ದು, ಈಗಾಗಲೇ ಇಲ್ಲಿನ ಇಬ್ಬರು ವೈದ್ಯರು, ಓರ್ವ ನರ್ಸ್ ಹಾಗೂ ಇಬ್ಬರು ಇತರ ಸಿಬ್ಬಂದಿಗಳಿಗೆ ಸೋಂಕು ತಗಲಿರುವ ವರದಿ ದೃಢಪಟ್ಟಿದೆ. ಅಲ್ಲದೇ ಒಂದು ವಾರ್ಡಿನಲ್ಲಿದ್ದ ಸುಮಾರು 9 ಮಂದಿ ರೋಗಿಗಳಲ್ಲೂ ಪಾಸಿಟಿವ್ ಬಂದಿರುವ ಶಂಕೆ ವ್ಯಕ್ತವಾಗಿದೆ.

ಕೊರೋನದ ಯಾವುದೇ ಲಕ್ಷಣಗಳಿಲ್ಲದ, ಆದರೆ ಸೋಂಕು ಇದ್ದ ರೋಗಿಯೊಬ್ಬರು ಅವರಿಗಿದ್ದ ಕಾಯಿಲೆಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯ ವಾರ್ಡಿಗೆ ದಾಖಲಾಗಿದ್ದು, ಬಳಿಕ ಅವರಲ್ಲಿ ಜ್ವರದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ.

ಇದರಿಂದ ಆ ರೋಗಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್ ಹಾಗೂ ಇತರ ಸಿಬ್ಬಂದಿಗಳಿಗೂ ಸೋಂಕು ತಗಲಿರಬೇಕೆಂದು ಶಂಕಿಸಲಾಗಿದೆ. ಇದೀಗ ಒಬ್ಬ ವೈದ್ಯರು ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದರೆ, ಇನ್ನೊಬ್ಬರು ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಆಸ್ಪತ್ರೆಯ ಉನ್ನತ ಮೂಲಗಳು ತಿಳಿಸಿವೆ. ಉಳಿದ ಸಿಬ್ಬಂದಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಲ್ಲದೇ ಅದೇ ವಾರ್ಡಿನಲ್ಲಿದ್ದ ಎಲ್ಲಾ ರೋಗಿಗಳ ಗಂಟಲುದ್ರವ ಪರೀಕ್ಷೆ ನಡೆಸಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಈ ನಡುವೆ ಇಡೀ ವಾರ್ಡ್‌ನ್ನು ಕೊರೋನ ಐಸೋಲೇಷನ್ ವಾರ್ಡಾಗಿ ಪರಿವರ್ತಿಸಿ, ಅಲ್ಲಿಗೆ ಯಾರಿಗೂ ಪ್ರವೇಶ ನೀಡಲಾಗುತ್ತಿಲ್ಲ ಎಂದು ಈ ಮೂಲ ತಿಳಿಸಿದೆ.

ಜಿಲ್ಲಾಸ್ಪತ್ರೆಯನ್ನು ಸ್ಯಾನಟೈಸ್‌ಗೊಳಪಡಿಸುವ ಕುರಿತು ಚರ್ಚೆ ನಡೆದಿದ್ದು, ಈ ಬೆಳವಣಿಗೆಯಿಂದ ಈ ಆಸ್ಪತ್ರೆಯನ್ನೇ ನಂಬಿರುವ ಬಡವರು ಹಾಗೂ ಮದ್ಯಮ ವರ್ಗ ಆತಂಕಕ್ಕೊಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News