ಕೊರೋನ ತಡೆಗೆ ಉಡುಪಿ ಜಿಲ್ಲೆಯ 10 ಗಡಿಗಳು ಸೀಲ್‌ಡೌನ್

Update: 2020-07-15 16:45 GMT

ಉಡುಪಿ, ಜು.15: ಕೊರೋನ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಉಡುಪಿ ಜಿಲ್ಲೆಯ ಎಲ್ಲ 10 ಗಡಿಗಳನ್ನು ಇಂದು ರಾತ್ರಿಯೇ ಸೀಲ್‌ಡೌನ್ ಮಾಡಿ, ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗಡಿಭಾಗವಾಗಿರುವ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಇನ್ನೊಂದು ಗಡಿ ಭಾಗವಾದ ಪಲಿಮಾರು ಕರ್ನಿರೆ ರಸ್ತೆಯನ್ನೂ ಮುಚ್ಚಲಾಗಿದೆ. ಸಂಜೆಯ ವೇಳೆ ಕಾಪು ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್, ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಬೈಂದೂರು ತಾಲೂಕು ವ್ಯಾಪ್ತಿಯ ಪ್ರಮುಖ ಗಡಿ ಭಾಗವಾಗಿರುವ ಶಿರೂರಿ ನಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಸೀಲ್‌ಡೌನ್ ಮಾಡಲಾಗಿದೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯನ್ನು ಸಂಪರ್ಕಿಸುವ ಕೊಲ್ಲೂರು ಗಡಿಯನ್ನು ಕೂಡ ಸೀಲ್‌ಡೌನ್ ಮಾಡಲಾಗಿದೆ. ಕುಂದಾಪುರ ತಾಲೂಕು ವ್ಯಾಪ್ತಿಯ ಹೊಸಂಗಡಿ ಗಡಿಯನ್ನು ಬಂದ್ ಮಾಡಲಾಗಿದೆ.

ಹೆಬ್ರಿ ತಾಲೂಕು ವ್ಯಾಪ್ತಿಯ ಹೆಬ್ರಿ-ಆಗುಂಬೆ ಮಾರ್ಗದ ಸೋಮೇಶ್ವರ ಗಡಿ ಪ್ರದೇಶವನ್ನು ಬಂದ್ ಮಾಡಿ ಸೀಲ್‌ಡೌನ್ ಮಾಡಲಾಗಿದೆ. ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿ, ಸಿಸಿಟಿವಿ ಅಳವಡಿಸಲಾಗಿದೆ. ಕಾರ್ಕಳ ತಾಲೂಕು ವ್ಯಾಪ್ತಿಯ ಮಾಳ, ಸಚ್ಚರಿಪೇಟೆ, ಬಜಗೋಳಿ, ಕಾಂತಾವಾರ ಸೇರಿದಂತೆ ಒಟ್ಟು ಐದು ಗಡಿಗಳನ್ನು ಸೀಲ್ ಮಾಡಲಾಗಿದೆ.

‘ಹೊರ ಜಿಲ್ಲೆಯನ್ನು ಸಂಪರ್ಕಿಸುವ ಜಿಲ್ಲೆಯ ಒಟ್ಟು 10 ಗಡಿ ಪ್ರದೇಶವನ್ನು ಇಂದು ರಾತ್ರಿಯಿಂದಲೇ ಚೆಕ್‌ಪೋಸ್ಟ್ ನಿರ್ಮಿಸಿ ಸೀಲ್‌ಡೌನ್ ಮಾಡಲಾಗಿದೆ. ಪಾಸ್ ಇಲ್ಲದ ಯಾವುದೇ ವಾಹನಗಳನ್ನು ಒಳಗೆ ಅಥವಾ ಹೊರಗಡೆ ಬಿಡದಂತೆ ಆದೇಶಿಸಲಾಗಿದೆ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯ ಇರುವಷ್ಟು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ’
-ವಿಷ್ಣುವರ್ದನ್, ಪೊಲೀಸ್ ಅಧೀಕ್ಷಕ, ಉಡುಪಿ ಜಿಲ್ಲೆ

ಹೆಜಮಾಡಿಯಲ್ಲಿ ಚೆಕ್‌ಪೋಸ್ಟ್ ಮೂಲಕ ಜಿಲ್ಲಾಗಡಿ ಪ್ರವೇಶಕ್ಕೆ ಇರುವ ನಿರ್ಬಂಧಗಳನ್ನು ಪಾಲಿಸಲು ನಿಗಾ ವಹಿಸಲಾಗುವುದು. ತುರ್ತು ಆರೋಗ್ಯ ಸಂಬಂಧಿ ಸಮಸ್ಯೆಗಾಗಿ ಜಿಲ್ಲೆಗೆ ಆಗಮಿಸುವ ಆ್ಯಂಬುಲೆನ್ಸ್‌ಗಳನ್ನು ಸೂಕ್ತ ದಾಖಲೆಗಳ ಪರಿಶೀಲನೆ ಬಳಿಕ ಒಳಬಿಡಲಾಗುವುದು. ಗುರುತು ಚೀಟಿಯನ್ನು ಪರಿಶೀಲಿಸಿ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಉಳಿದಂತೆ ಯಾರಿಗೂ ಪ್ರವೇಶ ಇರುವುದಿಲ್ಲ.
-ಮುಹಮ್ಮದ್ ಇಸ್ಹಾಕ್, ತಹಶೀಲ್ದಾರ್, ಕಾಪು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News