ಎಲ್ಎಸಿಯಲ್ಲಿ ಒಪ್ಪಿತ ಶಿಷ್ಟಾಚಾರ ಅನುಸರಿಸಿ: ಸೇನಾ ಮಾತುಕತೆ ಸಂದರ್ಭ ಚೀನಾ ಸೇನೆಗೆ ಸೂಚಿಸಿದ ಭಾರತ

Update: 2020-07-15 16:47 GMT

ಹೊಸದಿಲ್ಲಿ, ಜು. 15: ಪೂರ್ವ ಲಡಾಕ್ ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಹಾಗೂ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಶಾಂತಿ ನೆಮ್ಮದಿ ಮರು ಸ್ಥಾಪಿಸಲು ಗಡಿ ನಿರ್ವಹಣೆಗೆ ಸಂಬಂಧಿಸಿ ಉಭಯ ದೇಶಗಳು ಒಪ್ಪಿಕೊಂಡ ಎಲ್ಲ ಶಿಷ್ಟಾಚಾರಗಳನ್ನು ಅನುಸರಿಸಬೇಕು ಎಂದು ಸುಮಾರು 15 ಗಂಟೆಗಳ ಮಾತುಕತೆ ಸಂದರ್ಭ ಭಾರತೀಯ ಸೇನೆ ಸ್ಪಷ್ಟ ಸಂದೇಶವನ್ನು ಚೀನಾ ಸೇನೆಗೆ ರವಾನಿಸಿದೆ ಎಂದು ಕೇಂದ್ರ ಸರಕಾರ ಹೇಳಿದೆ.

 ಬುಧವಾರ ಮುಂಜಾನೆ 2 ಗಂಟೆಗೆ ಅಂತ್ಯಗೊಂಡ ಉಭಯ ಸೇನೆಗಳ ಹಿರಿಯ ಕಮಾಂಡರ್ ಗಳ ನಡುವಿನ ತೀವ್ರ ಹಾಗೂ ಸಂಕೀರ್ಣ ಮಾತುಕತೆ ಸಂದರ್ಭ ಸೇನೆಯು ‘ಕೆಂಪು ರೇಖೆ’ಗಳ ಬಗ್ಗೆ ಚೀನಾ ಸೇನೆಗೆ ತಿಳಿಸಿತು ಹಾಗೂ ಈ ಪ್ರದೇಶದ ಒಟ್ಟು ಪರಿಸ್ಥಿತಿ ಸುಧಾರಿಸುವ ಜವಾಬ್ದಾರಿ ಚೀನಾದ ಮೇಲಿದೆ ಎಂದು ಹೇಳಿತು ಎಂದು ಮೂಲಗಳು ತಿಳಿಸಿವೆ.

ಮುಂದಿನ ಹಂತದ ಹಿಂದೆ ಸರಿಯುವಿಕೆಯನ್ನು ಕಾರ್ಯ ರೂಪಕ್ಕೆ ತರಲು ನಿರ್ದಿಷ್ಟ ವಿಧಾನಗಳಿಗೆ ಉಭಯ ಸೇನೆಗಳು ಒಪ್ಪಿಕೊಂಡಿವೆ ಹಾಗೂ ಉಭಯ ಸೇನೆಯ ಉನ್ನತ ಅಧಿಕಾರಿಗಳೊಂದಿಗೆ ಒಪ್ಪಿದ ಅಂಶವನ್ನು ಚರ್ಚಿಸಿದ ಬಳಿಕ ಪರಸ್ಪರ ಸಂಪರ್ಕ ಸಾಧಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಲೆಫ್ಟಿನೆಂಟ್ ಜನರಲ್ ಮಟ್ಟದ ಮಾತುಕತೆಯ ನಾಲ್ಕನೇ ಸುತ್ತು ಮಂಗಳವಾರ ಬೆಳಗ್ಗೆ 11 ಗಂಟೆಗೆ ನಿಯೋಜಿತ ಸಭೆಯ ಸ್ಥಳವಾದ ವಾಸ್ತವಿಕ ನಿಯಂತ್ರಣ ರೇಖೆಯ ಭಾರತೀಯ ಭಾಗದ ಚುಶುಲ್ನಲ್ಲಿ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಭಾರತೀಯ ನಿಯೋಗದ ನೇತೃತ್ವವನ್ನು ಲೇಹ್ ನೆಲೆಯ 14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ವಹಿಸಿದ್ದರು. ಚೀನಾ ನಿಯೋಗದ ನೇತೃತ್ವವನ್ನು ದಕ್ಷಿಣ ಕ್ಸಿಂಜಿಯಾಂಗ್ ಸೇನಾ ವಲಯದ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News