​ಕೊರೋನ ಜನಜಾಗೃತಿಗಾಗಿ ಎನ್‌ಡಬ್ಲುಎಫ್ ಅಭಿಯಾನ

Update: 2020-07-15 17:37 GMT

ಮಂಗಳೂರು, ಜು.15: ದೇಶಾದ್ಯಂತ ಕೋವಿಡ್-19 ಪ್ರಕರಣಗಳು ವ್ಯಾಪಕವಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದ ಜನಸಾಮಾನ್ಯರು ಭಯದಿಂದ ಬದುಕುತ್ತಿದ್ದಾರೆ. ಸರಕಾರ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಪರೀಕ್ಷೆ ನಡೆಸಲು ಅನುಮತಿ ನೀಡಿದ ಬಳಿಕ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಲಾಕ್‌ಡೌನ್ ಪರಿಣಾಮದಿಂದ ಜನಸಾಮಾನ್ಯರು ಆರ್ಥಿಕವಾಗಿ ಅತಂತ್ರವಾಗಿರುವುದರಿಂದ ಸರಕಾರವು ಧೈರ್ಯ ತುಂಬಬೇಕಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್ ಆಫ್ ಇಂಡಿಯಾ ‘ಕೊರೋನ ಜಯಿಸೋಣ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಜು.15ರಿಂದ ರಾಜ್ಯವ್ಯಾಪಿ ಅಭಿಯಾನ ಆರಂಭಿಸಿದೆ ಎಂದು ಎನ್‌ಡಬ್ಲುಎಫ್ ರಾಜ್ಯಾಧ್ಯಕ್ಷ ಝೀನತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ರೋಗಿಗಳ ನೆರವಿಗಾಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕಿತ್ತು. ಆದರೆ ಕೆಲವು ಆಸ್ಪತ್ರೆಗಳಲ್ಲಿ ಗರ್ಭಿಣಿಯರಲ್ಲದೇ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ದಾಖಲಿಸದೆ ಅಮಾನವೀಯ ರೀತಿಯಲ್ಲಿ ವರ್ತಿಸಲಾಗುತ್ತಿದೆ. ಒಂದು ವೇಳೆ ಒಳರೋಗಿಯಾಗಿ ದಾಖಲಿಸಿದರೂ ಒತ್ತಾಯಪೂರ್ವಕವಾಗಿ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದ ರೋಗಿಗಳ ವರದಿಗಳು ಪಾಸಿಟಿವ್ ಎಂಬ ಗೊಂದಲಕಾರಿಯಾದಂತಹ ವರದಿಗಳು ಹೊರ ಬರುತ್ತಿದೆ. ಇದರಿಂದಾಗಿ ಸಣ್ಣಪುಟ್ಟ ಮತ್ತು ಪ್ರಮುಖವಾಗಿ ದೊಡ್ಡ ಖಾಯಿಲೆ ಇರುವ ರೋಗಿಗಳು ಭೀತಿಯಿಂದ ಆಸ್ಪತ್ರೆಗಳಿಗೆ ಹೋಗದೆ ಮನೆಯಲ್ಲೇ ಉಳಿದು ಜೀವ ಕಳೆದುಕೊಳ್ಳುವಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತಿದೆ.

ಕೆಲವು ಖಾಸಗಿ ಆಸ್ಪತ್ರೆಗಳು ಕೊರೋನದ ಹೆಸರಿನಲ್ಲಿ ನಡೆಸುತ್ತಿರುವ ದಂಧೆಯೇ ಇದಕ್ಕೆ ಕಾರಣವಾಗಿದೆ. ಇದರ ಜೊತೆಗೆ ಕೊರೋನ ವಾರಿಯರ್ಸ್ ಎಂದು ಗೌರವ ಪಡೆದ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ ಅವರ ಸೇವೆಯನ್ನು ನಿರ್ಲಕ್ಷಿಸಿ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News