ಜಿಯೋದಲ್ಲಿ 33,737 ಕೋಟಿ ರೂ. ಹೂಡಿಕೆಗೆ ಗೂಗಲ್ ನಿರ್ಧಾರ

Update: 2020-07-15 17:43 GMT

ನ್ಯೂಯಾರ್ಕ್,ಜು.15: ರಿಲಯನ್ಸ್ ಇಂಡಸ್ಟ್ರೀಸ್ ನ ಡಿಜಿಟಲ್ ಉದ್ಯಮವಾದ ರಿಲಯನ್ಸ್ ಜಿಯೋ ಲಿಮಿಟೆಡ್ ನಲ್ಲಿ 33,737 ಕೋಟಿ ರೂ. (4.5 ಬಿಲಿಯನ್ ಡಾಲರ್) ಹೂಡಿಕೆ ಮಾಡಲು ಜಾಗತಿಕ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ.

33,737 ಕೋಟಿ ರೂ.ಹೂಡಿಕೆಯೊಂದಿಗೆ ಗೂಗಲ್ ಜಿಯೋ ಫ್ಲಾಟ್ಫಾರ್ಮ್ ಶೇ.7.73ರಷ್ಟು ಶೇರುಗಳನ್ನು ಖರೀದಿಸಿದಂತಾಗಿದೆ. ಎಂದು ರಿಲಾಯನ್ಸ್ ಸಮೂಹದ ವರಿಷ್ಠ ಮುಖೇಶ್ ಅಂಬಾನಿ ಬುಧವಾರ ತಿಳಿಸಿದ್ದಾರೆ.

ದೇಶದ 135 ಕೋಟಿ ಜನಸಂಖ್ಯೆಗೆ ಅತ್ಯಂತ ಸುಲಭವಾಗಿ ಇಂಟರ್ನೆಟ್ ಹಾಗೂ ಮೊಬೈಲ್ ಫೋನ್ ಗಳು ಲಭ್ಯವಾಗುವಂತೆ ಮಾಡುವುದೇ ಈ ಒಪ್ಪಂದದ ಉದ್ದೇಶವೆಂದು ಗೂಗಲ್ ಸಂಸ್ಥೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಗೂಗಲ್ ಪಾಲುದಾರಿಕೆಯಿಂದಾಗಿ, ಜಿಯೋ ಸಂಸ್ಥೆಗೆ ಕೈಗೆಟಕುವ ದರದಲ್ಲಿ ಉತ್ಕೃಷ್ಟ ಮಟ್ಟದ ಮೊಬೈಲ್ ಸಾಧನಗಳನ್ನು ಸೃಷ್ಟಿಸಲು ಸಾಧ್ಯವಾಗಲಿದೆ ಎಂದು ಗೂಗಲ್ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

 ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಕೂಡಾ ಜಿಯೋ ಸಂಸ್ಥೆಯಲ್ಲಿ 500.70 ಕೋಟಿ ಡಾಲರ್ ಹೂಡಿಕೆ ಮಾಡಿದ್ದು, ಶೇ.10ಷ್ಟು ಶೇರುಗಳನ್ನು ಖರೀದಿಸಿದೆ.

ಸೋಮವಾರ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಅವರು, “ಮನುಕುಲದ ಇತಿಹಾಸದಲ್ಲೇ ಡಿಜಿಟಲ್ ಕ್ರಾಂತಿ, ಅತ್ಯಂತ ಮಹಾನ್ ಪರಿವರ್ತನೆಯಾಗಿದೆ. ಉತ್ತಮವಾದ ಜಗತ್ತಿನ ಸೃಷ್ಟಿಗೆ ಭಾರತವು ನೇತೃತ್ವ ವಹಿಸಬೇಕೆಂಬುದೇ ಜಿಯೋದ ಉದ್ದೇಶವಾಗಿದೆ ’’ ಎಂದು ಹೇಳಿದ್ದರು.

ಗೂಗಲ್ ನ ಹೂಡಿಕೆಯೊಂದಿಗೆ ಜಿಯೋ 20.2 ಶತಕೋಟಿ ಡಾಲರ್ (1,5,056 ಕೋಟಿ ರೂ.) ಹೂಡಿಕೆಯನ್ನು ಹೊಂದಿದಂತಾಗಿದೆ. ಹಾಲಿ ಶೇರುದಾರರಿಗೆ ದರಕಡಿತದೊಂದಿಗೆ ಶೇರುಗಳನ್ನು ಮಾರಾಟ ಮಾಡುವ ಮೂಲಕ ಇನ್ನೂ 8.1 ಶತಕೋಟಿ ಡಾಲರ್ (60,753 ಕೋಟಿ ರೂ.)ಗಳನ್ನು ಸಂಗ್ರಹಿಸುವ ನಿರೀಕ್ಷೆಯನ್ನು ಜಿಯೋ ಹೊಂದಿದೆ. ಆ ಮೂಲಕ ಜಿಯೋ ಒಟ್ಟು 2,12,809 ಕೋಟ ರೂ. ಸಂಚಿತ ಬಂಡವಾಳ (ಕ್ಯುಮುಲೇಟಿವ್ ಕ್ಯಾಪಿಟಲ್)ವನ್ನು ಜಿಯೋ ಹೊಂದುವ ನಿರೀಕ್ಷಯಿದೆ.

 ಸ್ಮಾರ್ಟ್ ಫೋನ್ ಅಭಿವೃದ್ಧಿಪಡಿಸುವ ಜೊತೆಗೆ ಜಿಯೋ ಸಂಸ್ಥೆಯು  ಸಾಫ್ಟ್ ವೇರ್ ಸೊಲ್ಯೂಶನ್ ಗಳನ್ನು ಅಭಿವೃದ್ಧಿಪಡಿಸಲು ಗೂಗಲ್ ಪರಿಣತಿಯನ್ನು ಬಳಸಿಕೊಳ್ಳಲಿದೆ.

  ಈ ಮಧ್ಯೆ ಗೂಗಲ್ ಜೊತೆಗೆ ಖ್ಯಾತ ಚಿಪ್ ಮೇಕರ್ ಸಂಸ್ಥೆ ಕ್ವಾಲ್ಕಾಮ್ ಕೂಡಾ ರಿಲಾಯನ್ಸ್ ಜಿಯೋದಲ್ಲಿ 97.2 ದಶಲಕ್ಷ ಡಾಲರ್ (730 ಕೋಟಿ ರೂ.) ಹೂಡಿಕೆ ಮಾಡಲು ನಿರ್ಧರಿಸಲಿದೆ. ಭಾರತದಲ್ಲಿ 5 ಜಿ ಮೂಲಸೌಕರ್ಯವನ್ನು ಸ್ಥಾಪಿಸಲು ಈ ಹೂಡಿಕೆಯನ್ನು ಬಳಸಿಕೊಳ್ಳಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News