ಅನರ್ಹ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಚಿನ್ ಪೈಲಟ್, ಬಂಡಾಯ ಶಾಸಕರು

Update: 2020-07-16 18:15 GMT

ಜೈಪುರ , ಜು.16: ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿಗರು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ನೋಟಿಸನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ಅರ್ಜಿಯ ವಿಚಾರಣೆಯನ್ನು ರಾಜಸ್ತಾನ ಹೈಕೋರ್ಟ್ ಮುಂದೂಡಿದೆ. ಈ ಮೊದಲು ಸಲ್ಲಿಸಿರುವ ಮೇಲ್ಮನವಿಯಲ್ಲಿ ತಿದ್ದುಪಡಿ ಮಾಡಬಯಸುವುದಾಗಿ ಪೈಲಟ್ ಬಣದ ವಕೀಲರು ಹೈಕೋರ್ಟ್ ಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಕ್ರಮ ಕೈಗೊಂಡಿದೆ. 

ರಾಜಸ್ತಾನ ವಿಧಾನಸಭೆಯ ಸ್ಪೀಕರ್ ನೀಡಿರುವ ಅನರ್ಹತೆಯ ನೋಟಿಸ್ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹೊಸ ಅರ್ಜಿ ಸಲ್ಲಿಸಲಾಗುವುದು. ಸಂವಿಧಾನದ 10ನೇ ಅನುಸೂಚಿಯಲ್ಲಿ ಸೇರಿಸಿರುವ ಪಕ್ಷಾಂತರ ವಿರೋಧಿ ಕಾನೂನನ್ನು ಈ ಪ್ರಕರಣಕ್ಕೆ ಅನ್ವಯಿಸಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗುವುದು ಎಂದು ಅರ್ಜಿದಾರರ ಪರ ವಕೀಲರಾದ ಹರೀಶ್ ಸಾಲ್ವೆ ಹೈಕೋರ್ಟ್ ಗೆ ಮನವಿ ಮಾಡಿದರು.

ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ಹೊಸ ಅರ್ಜಿ ಸಲ್ಲಿಸಲು ಪೈಲಟ್ ಬಣಕ್ಕೆ ಕಾಲಾವಕಾಶ ನೀಡಿತಲ್ಲದೆ , ತಿದ್ದುಪಡಿ ಮಾಡಲಾದ ಅರ್ಜಿಯನ್ನು ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ ಎಂದು ತಿಳಿಸಿತು. ಇದಕ್ಕೂ ಮುನ್ನ, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಬಣದ ಶಾಸಕರನ್ನು ಶಾಸಕತ್ವದಿಂದ ಅನರ್ಹಗೊಳಿಸುವ ನೋಟಿಸನ್ನು ಸ್ಪೀಕರ್ ರವಾನಿಸಿದ್ದು ಶುಕ್ರವಾರ(ಜು.17)ದೊಳಗೆ ಉತ್ತರಿಸುವಂತೆ ಸೂಚಿಸಿದ್ದರು. ನೋಟಿಸನ್ನು ಪ್ರಶ್ನಿಸಿ ಪೈಲಟ್ ಬಣ ಹೈಕೋರ್ಟ್ ಮೆಟ್ಟಿಲೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News