ಉಡುಪಿಯಲ್ಲಿ ಕೋವಿಡ್‌ಗೆ ಇಬ್ಬರು ಸಾವು

Update: 2020-07-16 15:07 GMT

ಉಡುಪಿ, ಜು.16: ನೋವೆಲ್ ಕೊರೋನ ವೈರಸ್ (ಕೋವಿಡ್-19) ಉಡುಪಿ ಜಿಲ್ಲೆಯಲ್ಲಿ ಸರಣಿ ಬಲಿಯನ್ನು ಪಡೆಯಲು ಪ್ರಾರಂಭಿಸಿದ್ದು, ಇಂದು ಬೆಳಗ್ಗೆ ಉಡುಪಿ ಮತ್ತು ಕುಂದಾಪುರಗಳಲ್ಲಿ ಇಬ್ಬರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕುಕ್ಕೆಹಳ್ಳಿಯ 49ರ ಹರೆಯ ವ್ಯಕ್ತಿ ಕೋವಿಡ್ ಪಾಸಿಟಿವ್‌ನಿಂದ ಮೃತಪಟ್ಟಿದ್ದಾರೆ. ಹೈಶುಗರ್‌ನಿಂದಾಗಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದ ಅವರನ್ನು ಪರೀಕ್ಷೆಗೊಳಪಡಿಸಿದಾಗ ಕೊರೋನ ಸೋಂಕು ಕಂಡುಬಂದಿದ್ದು ಕೂಡಲೇ ರಾತ್ರಿಯೇ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಕೋವಿಡ್‌ನಿಂದ ಇನ್ನೊಬ್ಬರ ಸಾವು ನಿನ್ನೆ ರಾತ್ರಿ ಕುಂದಾಪುರದಲ್ಲಿ ಸಂಭವಿಸಿದೆ. ಮರವಂತೆಯ 54 ವರ್ಷ ಪ್ರಾಯದ ವ್ಯಕ್ತಿ ತೀವ್ರತರ ಅಸ್ತಮಾದಿಂದ ನರಳುತಿದ್ದು, ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಉಸಿರಾಟದ ತೊಂದರೆಯಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ತಿಳಿಸಿದ್ದು, ಅದರಂತೆ ಕರೆದುಕೊಂಡು ಬರುತಿದ್ದಾಗ ಮಾರ್ಗ ಮಧ್ಯೆ ಅವರು ಮೃತಪಟ್ಟರೆಂದು ಹೇಳಲಾಗಿದೆ. ಬಳಿಕ ಅವರಿಗೆ ತ್ವರಿತ ಕೋವಿಡ್ ಟೆಸ್ಟ್ ನಡೆಸಿದಾಗ ಪಾಸಿಟಿವ್ ಕಂಡುಬಂದಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ ಏಳಕ್ಕೇರಿದೆ. ಇವರಲ್ಲಿ ಆರಂಭಿಕ ಮೂವರು ಮುಂಬಯಿಯಿಂದ ಬಂದು ಇಲ್ಲಿ ಪಾಸಿಟಿವ್ ಪತ್ತೆಯಾದವರಾದರೆ ಉಳಿದ ನಾಲ್ಕರೂ ಸ್ಥಳೀಯರಾಗಿದ್ದು, ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕದಿಂದ ಸೋಂಕನ್ನು ತಗಲಿಸಿಕೊಂಡು, ತಮಗಿದ್ದ ಇತರ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾರೆ.

ಈ ನಡುವೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಅಂಕೋಲದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರ ಅಂತ್ಯಕ್ರಿಯೆಯನ್ನು ಬುಧವಾರ ಉಡುಪಿ ಬೀಡಿನಗುಡ್ಡೆ ಯಲ್ಲಿ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗಿದೆ ಎಂದೂ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News