ಲಾಕ್‍ಡೌನ್‍ಗೆ ಉಪ್ಪಿನಂಗಡಿಯಲ್ಲಿ ಉತ್ತಮ ಪ್ರತಿಕ್ರಿಯೆ

Update: 2020-07-16 09:36 GMT

ಉಪ್ಪಿನಂಗಡಿ: ಕೋವಿಡ್-19 ನಿಯಂತ್ರಣದ ಹಿನ್ನೆಲೆಯಲ್ಲಿ ಘೋಷಿಸಿದ ಲಾಕ್‍ಡೌನ್ ಗೆ ಉಪ್ಪಿನಂಗಡಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೂರ್ವಾಹ್ನ 11 ಗಂಟೆಯವರೆಗೆ ಅಗತ್ಯ ಸಾಮಗ್ರಿಗಳ ಅಂಗಡಿಗಳು ತೆರೆದಿತ್ತಾದರೂ, ಜನರ ಸಂಚಾರ ತೀರಾ ಕಡಿಮೆಯಿತ್ತು.

ದಿನಸಿ ಸಾಮಗ್ರಿ, ಹಾಲು ಹೀಗೆ ಕೆಲವು ಅಗತ್ಯ ವಸ್ತುಗಳ ಅಂಗಡಿಗಳನ್ನು ಪೂರ್ವಾಹ್ನ 11 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿತ್ತು. ಈ ಅಂಗಡಿಗಳು ತೆರೆದಿತ್ತಾದರೂ, ಗ್ರಾಹಕರ ಕೊರತೆ ಕಂಡು ಬರುತ್ತಿತ್ತು. ಕಳೆದ ಲಾಕ್‍ಡೌನ್‍ನ ಸಂದರ್ಭ ಹಾಗೂ ಇಂದಿನ ಲಾಕ್‍ಡೌನ್‍ನ ಸಂದರ್ಭವನ್ನು ಹೋಲಿಸಿದರೆ ಕಳೆದ ಬಾರಿ ಜನರು ಅಂಗಡಿಗಳಿಗೆ ಮುಗಿ ಬೀಳುತ್ತಿದ್ದರು. ಆದರೆ ಈ ಬಾರಿ ಮಾತ್ರ ಹೆಚ್ಚಿನವರು ಮನೆಯಿಂದ ಹೊರಗಿಳಿಯಲೇ ಇಲ್ಲ. ವಾಹನಗಳ ಸಂಚಾರ ಕೂಡಾ ತೀರಾ ವಿರಳವಾಗಿತ್ತು. 

ಹೆಚ್ಚಿನವರು ಕಳೆದ ಬಾರಿಯ ಲಾಕ್‍ಡೌನ್‍ ಅನ್ನು ರಜೆಯ ಮಜಾದಿಂದ ಕಳೆದಿದ್ದಾರೆ. ಆದರೆ ಈಗ ಆರ್ಥಿಕ ಸೇರಿದಂತೆ ಎಲ್ಲಾ ಸಂಕಷ್ಟದ ಅರಿವಾಗಿದೆ. ಆದ್ದರಿಂದ ಈ ಬಾರಿ ಯಾರೂ ಈ ಹಿಂದಿನಂತೆ ಬೀದಿಗಿಳಿಯದೇ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಲಾಕ್‍ಡೌನ್ ಅನ್ನು ಕೆಲವರು ವಿಶ್ಲೇಷಣೆ ಮಾಡುತ್ತಿದ್ದುದ್ದು ಕಂಡು ಬಂತು.

ಉಪ್ಪಿನಂಗಡಿಯಲ್ಲಿ ನಿಲ್ದಾಣದಲ್ಲಿ ಅಟೋ ರಿಕ್ಷಾಗಳು ಸಾಲುಗಟ್ಟಿ ನಿಂತಿದ್ದನ್ನು ಕಂಡ ಉಪ್ಪಿನಂಗಡಿ ಪೊಲೀಸರು ಲಾಕ್‍ಡೌನ್ ಅವಧಿಯಲ್ಲಿ ಬಾಡಿಗೆ ನಡೆಸದಂತೆ ತಿಳಿಸಿ ಅವರನ್ನು ಅಲ್ಲಿಂದ ವಾಪಸ್ ಕಳುಹಿಸಿದರು. 11 ಗಂಟೆಯ ಬಳಿಕ ಪೇಟೆಯಲ್ಲಿ ಸುತ್ತಾಡಿದ ಪೊಲೀಸರು ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿಸುತ್ತಿರುವುದು ಕಂಡು ಬಂತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News