ಉಡುಪಿ: ಭಾರೀ ಮಳೆ; ಗಾಳಿಗೆ ಬಾಳೆತೋಟಕ್ಕೆ ಹಾನಿ
ಉಡುಪಿ, ಜು.16: ಉಡುಪಿ ಜಿಲ್ಲೆಯಲ್ಲಿ ಕಳೆದ 36 ಗಂಟೆಗಳ ಅವಧಿಯಲ್ಲಿ ಉತ್ತಮ ಮಳೆಯಾಗಿದ್ದು, ಗಾಳಿ-ಮಳೆಗೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಮನೆ ಹಾಗೂ ಸೊತ್ತುಗಳಿಗೆ ಹಾನಿಯಾದ ಬಗ್ಗೆ ವರದಿಗಳು ಬಂದಿವೆ.
ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ಕೃಷ್ಣ ನಾಯಕ್ ಎಂಬವರ ಮನೆಯ ಬಾಳೆ ತೋಟ ಬೀಸಿದ ಗಾಳಿಗೆ ಹಾನಿಗೊಂಡಿದ್ದು 35 ಸಾವಿರ ರೂ.ಗಳಿಗೂ ಅಧಿಕ ನಷ್ಟವಾಗಿರುವ ಬಗ್ಗೆ ವರದಿಯಾಗಿದೆ. ಅದೇ ಗ್ರಾಮದ ಲಕ್ಷ್ಮಣ ನಾಯಕ್ ಎಂಬವರ ಮನೆ ಮೇಲೆ ಮರಬಿದ್ದು ಭಾಗಶ: ಹಾನಿಯಾಗಿದ್ದು 50,000ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.
ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಚಣ್ಣಮ್ಮ ಬಿನ್ ಮರ್ಲಿ ಅವರ ವಾಸ್ತವ್ಯದ ಪಕ್ಕಾ ಮನೆಯ ಗೋಡೆ ಕುಸಿದು ಭಾಗಶ: ಹಾನಿ ಸಂಭವಿಸಿದ್ದು 35,000ರೂ. ಹಾಗೂ ಹೆಬ್ರಿ ತಾಲೂಕು ಶಿವಪುರ ಗ್ರಾಮದ ದಿನೇಶ್ ಎಂಬವರ ಮನೆಯು ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು 50,000ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 81 ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 82.6ಮಿ.ಮೀ. ಕುಂದಾಪುರದಲ್ಲಿ 85.5ಮಿ.ಮೀ. ಹಾಗೂ ಕಾರ್ಕಳದಲ್ಲಿ 73ಮಿ.ಮೀ. ಮಳೆಯಾಗಿದೆ.