ದಿಲ್ಲಿ ಹಿಂಸಾಚಾರ: ಮನೆ, ಸೊತ್ತು, ಜೀವ ಕಳೆದುಕೊಂಡವರಲ್ಲಿ ಹೆಚ್ಚಿನವರು ಮುಸ್ಲಿಮರು

Update: 2020-07-16 12:53 GMT

ಹೊಸದಿಲ್ಲಿ, ಜು.16: ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯನ್ನು ನಡುಗಿಸಿದ್ದ ಭೀಕರ ಹಿಂಸಾಚಾರದಲ್ಲಿ ಹತ್ಯೆಯಾದವರಲ್ಲಿ 77% ಜನ ಮುಸ್ಲಿಮರು ಹಾಗೂ ಹಿಂಸಾಚಾರದಲ್ಲಿ ಹಾನಿಗೊಳಗಾದ ಬಹುತೇಕ ಮನೆ ಮತ್ತು ಅಂಗಡಿಗಳು ಮುಸ್ಲಿಂ ಸಮುದಾಯದವರಿಗೆ ಸೇರಿದ್ದು ಎಂಬ ಮಾಹಿತಿಯನ್ನು ದಿಲ್ಲಿ ಪೊಲೀಸರು ಸಲ್ಲಿಸಿರುವ ಅಫಿದಾವಿತ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು thewire.in ಪ್ರಕಟಿಸಿದ ಸಿದ್ಧಾರ್ಥ್ ವರದರಾಜನ್ ಅವರ ವಿಶೇಷ ವರದಿಯಲ್ಲಿ ತಿಳಿಸಲಾಗಿದೆ.

ದಿಲ್ಲಿ ಗಲಭೆ ಹಿಂದೂ ವಿರೋಧಿ ಹಿಂಸಾಚಾರ ಎಂದು ಸಂಘಪರಿವಾರದ ವದಂತಿ ಕಾರ್ಖಾನೆ ನಿರಂತರವಾಗಿ ಬಣ್ಣಿಸುತ್ತಾ ಬಂದಿದ್ದರೂ, ಈ ಸಂಘಟಿತ ಹಿಂಸಾಚಾರದಿಂದ ಅತ್ಯಂತ ಹೆಚ್ಚು ತೊಂದರೆ ಮತ್ತು ನಷ್ಟ ಅನುಭವಿಸಿರುವರು ಮುಸ್ಲಿಮರು ಎಂಬುದು ದಿಲ್ಲಿ ಹೈಕೋರ್ಟ್ ಗೆ ದಿಲ್ಲಿ ಪೊಲೀಸರು ಸಲ್ಲಿಸಿರುವ ಅಫಿದಾವಿತ್ ನಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 ಹಿಂಸಾಚಾರದಲ್ಲಿ ಮೃತಪಟ್ಟ 52 ಜನರಲ್ಲಿ 40 ಮುಸ್ಲಿಮರು ( 77%), ಉಳಿದ 12 ಜನ ಹಿಂದುಗಳು ಎಂದು ಜುಲೈ 13ರಂದು ದಿಲ್ಲಿ ಹೈಕೋರ್ಟ್ ಗೆ ಸಲ್ಲಿಸಿರುವ ಅಫಿದಾವಿತ್ ನೊಂದಿಗಿರುವ ಅನುಬಂಧ(ಅನೆಕ್ಸರ್) ಪಟ್ಟಿಯಲ್ಲಿ ವಿವರಿಸಲಾಗಿದೆ. 53ನೇ ಮೃತವ್ಯಕ್ತಿ ಪೊಲೀಸ್ ಕಾನ್ ಸ್ಟೇಬಲ್ ರತನ್ಲಾಲ್ ಗುಂಡೇಟಿನಿಂದ ಮೃತಪಟ್ಟಿದ್ದು, ಅವರ ಹೆಸರನ್ನೂ ಹಿಂದುಗಳ ಪಟ್ಟಿಗೆ ಸೇರಿಸಿದರೂ ಅವರ ಸಂಖ್ಯೆ 13ಕ್ಕೇರುತ್ತದೆ.   

ಇದರ ಜೊತೆಗೆ ಲಗತ್ತಿಸಿರುವ ಪ್ರತ್ಯೇಕ ಪಟ್ಟಿಯಲ್ಲಿ ನಾಶವಾಗಿರುವ ಮನೆ ಮತ್ತು ಅಂಗಡಿಗಳ ವಿವರ ನೀಡಲಾಗಿದೆ. ಇಲ್ಲಿ ಕೂಡಾ ಮುಸ್ಲಿಮರು ಹೆಚ್ಚಿನ ನಷ್ಟ ಅನುಭವಿಸಿದ್ದರೂ, ದಿಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ಈ ಪ್ರಮಾಣವನ್ನು ಕಡಿಮೆ ತೋರಿಸಿರುವಂತೆ ಭಾಸವಾಗುತ್ತದೆ ಎಂದು thewire.in ವರದಿ ತಿಳಿಸುತ್ತದೆ.

ಹಾನಿಗೊಳಗಾದ 185 ಮನೆಗಳಲ್ಲಿ 14 ಹಿಂದುಗಳ, 50 ಮುಸ್ಲಿಮರ ಮನೆ ಎಂದು ವಿಂಗಡಿಸಲಾಗಿದೆ. ಇದರ ಪ್ರಕಾರ ಹಾನಿಗೊಳಗಾದ ಒಟ್ಟು ಮನೆಗಳಲ್ಲಿ ಕೇವಲ 27% ಮನೆಗಳು ಮುಸ್ಲಿಮರಿಗೆ ಸೇರಿದ್ದು. ಆದರೆ ಪ್ರದೇಶಾವಾರು ವಿಂಗಡಣೆಯನ್ನು ಸರಿಯಾಗಿ ಲೆಕ್ಕಹಾಕಿದರೆ ಮುಸ್ಲಿಮರ ಒಟ್ಟು ಮನೆಗಳ ಸಂಖ್ಯೆ 50ರಿಂದ 90ಕ್ಕೇರುತ್ತದೆ (ಅಂದರೆ 48.6%). ಇದರಲ್ಲಿಯೂ, ಅತ್ಯಧಿಕ ಮನೆಗಳು (54 ಮನೆಗಳು) ಹಾನಿಗೊಳಗಾದ ಖಜೂರಿ ಖಾಸ್ ಮತ್ತು ಕರಾವಲ್ ನಗರ(23)ಗಳ ವಿವರವನ್ನು ಪೊಲೀಸರು ತಡೆಹಿಡಿದಿದ್ದಾರೆ. ಈ ಎರಡೂ, ಮುಸ್ಲಿಮರನ್ನೂ ಒಳಗೊಂಡಿರುವ ಹಿಂದೂ ಬಹುಸಂಖ್ಯಾತ ಪ್ರದೇಶಗಳಾಗಿವೆ.

ಗಲಭೆಯಿಂದ ಹೆಚ್ಚಿನ ತೊಂದರೆಗೆ ಒಳಗಾದವರು ಇಲ್ಲಿರುವ ಮುಸ್ಲಿಮರಾಗಿದ್ದಾರೆ. ಹಾನಿಗೊಳಗಾದ 41.6% ಮನೆಗಳನ್ನು ‘ಅಜ್ಞಾತ(ತಿಳಿಯದಿರುವ)’ ಎಂಬ ಗುಂಪಿಗೆ ಸೇರಿಸಿದ್ದು ವಾಸ್ತವಿಕವಾಗಿ ಈ ಗುಂಪಿನಲ್ಲಿರುವ ಬಹುತೇಕ ಮನೆಗಳು ಮುಸ್ಲಿಮರದ್ದಾಗಿದೆ. ಆಗ ಹಾನಿಗೊಳಗಾದ ಮುಸ್ಲಿಮರ ಮನೆಗಳ ಪ್ರಮಾಣ 85-90%ಕ್ಕೆ ಹೆಚ್ಚುತ್ತದೆ. ಆದರೆ ಇಲ್ಲಿ ಕೂಡಾ ಪೊಲೀಸರು ಸರಿಯಾಗಿ ಎಣಿಸಿಲ್ಲ ಎಂಬ ಭಾವನೆ ಮೂಡುತ್ತದೆ. ಮಾರ್ಚ್ 3ರಂದು ಈದ್ಗಾ ಪರಿಹಾರ ಶಿಬಿರದಲ್ಲಿ ಸುಮಾರು ಸಾವಿರದಷ್ಟು ಸ್ಥಳಾಂತರಿತ ಮುಸ್ಲಿಮರು (ಮಹಿಳೆ ಮತ್ತು ಮಕ್ಕಳ ಸಹಿತ) ಇದ್ದರು ಮತ್ತು ಇವರಲ್ಲಿ ಹೆಚ್ಚಿನವರು ಅತ್ಯಂತ ಬಡವರಾಗಿದ್ದರು. ಒಂದು ಕುಟುಂಬದಲ್ಲಿ 5 ಜನರೆಂದು ಭಾವಿಸಿದರೂ ಸುಮಾರು 200 ಕುಟುಂಬಗಳು ನೆಲೆ ಕಳೆದುಕೊಂಡಂತಾಗಿದೆ. ಇದರಲ್ಲಿ ಹಲವರು ಸಂಬಂಧಿಕರ ಮನೆಗೆ ತೆರಳಿದ್ದರೆ , ಹಲವರು ದಿಲ್ಲಿಯನ್ನೇ ಬಿಟ್ಟು ಹೋಗಿದ್ದಾರೆ. ಇದೇ ರೀತಿ ಅಂಗಡಿಗಳಿಗೆ ಆಗಿರುವ ಹಾನಿಯನ್ನು ಕೂಡಾ ಕಡಿಮೆ ಲೆಕ್ಕ ಹಾಕಲಾಗಿದೆ.

ನೆರೆಹೊರೆವಾರು ವಿಂಗಡಣೆಯಲ್ಲೂ  ಹಾನಿಗೊಳಗಾದ 14% ಅಂಗಡಿಗಳು ಹಿಂದುಗಳದ್ದು, 53.4% ಅಂಗಡಿಗಳು ಮುಸ್ಲಿಮರದ್ದು ಎಂದು ತಿಳಿಸಲಾಗಿದೆ. ಆದರೆ ಖಜೂರಿ ಖಾಸ್ ಮತ್ತು ಕರಾವಾಲ್ ನಗರಗಳಲ್ಲಿ ಧರ್ಮದ ಆಧಾರದಲ್ಲಿ ವಿಂಗಡಣೆ ಮಾಡಿಲ್ಲ. ಅಲ್ಲದೆ, ‘ಅಜ್ಞಾತ(ತಿಳಿದಿಲ್ಲದ)’ ಗುಂಪಿನಲ್ಲಿರುವವರೂ ಹೆಚ್ಚಿನವರು ಮುಸ್ಲಿಮರು. ಈ ಎರಡು ಪ್ರದೇಶಗಳನ್ನು ಮತ್ತು ಸಂಬಂಧಿತ ಮಾಧ್ಯಮಗಳ ವರದಿಯನ್ನು ಗಮನಿಸಿದರೆ, ಅಂಗಡಿ ಮತ್ತು ವ್ಯಾಪಾರ ಸಂಸ್ಥೆಗಳ ಮೇಲೆ ಆಗಿರುವ 80ರಿಂದ 85% ದಾಳಿ ಪ್ರಕರಣಗಳು ಮುಸ್ಲಿಮರನ್ನು ಗುರಿಯಾಗಿಸಿ ನಡೆದಿದೆ.

 ದಿಲ್ಲಿ ಹಿಂಸಾಚಾರಕ್ಕೂ ಮುನ್ನ ಪ್ರಚೋದನಕಾರಿಯಾಗಿ ಭಾಷಣ ಮಾಡಿರುವ ಬಿಜೆಪಿ ಮುಖಂಡರಾದ ಕಪಿಲ್ ಮಿಶ್ರಾ ಮತ್ತು ಅನುರಾಗ್ ಠಾಕುರ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಆಗ್ರಹಿಸಿ ಹರ್ಷ ಮಂದರ್, ಶೇಖ್ ಮುಸ್ತಾಫ ಫಾರೂಖ್, ರಾಹುಲ್ ರಾಯ್, ಬೃಂದಾ ಕಾರಟ್ ಮತ್ತಿತರು ಸಲ್ಲಿಸಿರುವ ಹಲವು ಅರ್ಜಿಗಳಿಗೆ ಪ್ರತಿಯಾಗಿ ದಿಲ್ಲಿ ಪೊಲೀಸರು ಈ ಅಫಿದಾವಿತ್ ಸಲ್ಲಿಸಿದ್ದಾರೆ. ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಇದುವರೆಗೆ ನಡೆಸಿರುವ ತನಿಖೆಯಲ್ಲಿ ಈ ವ್ಯಕ್ತಿಗಳ ಪಾತ್ರವನ್ನು ಸಾಬೀತುಪಡಿಸುವ ಯಾವುದೇ ಪುರಾವೆ ಲಭಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಹಾನಿಗೊಳಗಾದ ದೇವಸ್ಥಾನದ ಸಂಖ್ಯೆ 2ರಿಂದ 6ಕ್ಕೇರಿತು:

ಪೊಲೀಸರ ಅಫಿದಾವಿತ್ ನಲ್ಲಿ ಎಲ್ಲಕ್ಕಿಂತ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿರುವುದು ಹಾನಿಗೊಳಗಾದ ದೇವಸ್ಥಾನಗಳ ಸಂಖ್ಯೆಯಲ್ಲಿ. ಕಳೆದ ತಿಂಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರಿಸಿದ್ದ ದಿಲ್ಲಿ ಪೊಲೀಸರು ಗಲಭೆಯಲ್ಲಿ 2 ದೇವಸ್ಥಾನ ಮತ್ತು 13 ಮಸೀದಿಗಳಿಗೆ ಹಾನಿಯಾಗಿದೆ ಎಂದು ತಿಳಿಸಿದ್ದರು. ಆದರೆ ಅಫಿದಾವಿತ್ನಲ್ಲಿ ದೇವಸ್ಥಾನಗಳ ಸಂಖ್ಯೆ 6ಕ್ಕೇರಿದೆ. ಮಸೀದಿಗಳು, ದರ್ಗಾಗಳು ಹಾಗೂ ಮದರಸಗಳ ಮೇಲೆ ನಡೆಸಿರುವ ದಾಳಿಯನ್ನು ಮಾಧ್ಯಮಗಳಲ್ಲಿ ಸ್ಪಷ್ಟವಾಗಿ , ಫೋಟೋ ಸಹಿತ ವರದಿ ಮಾಡಲಾಗಿದೆ. ಫೆಬ್ರವರಿ 25ರಂದು ಅಶೋಕ ನಗರದಲ್ಲಿ ಮಸೀದಿಗೆ ಬೆಂಕಿ ಹಚ್ಚಿದ್ದೇ ಅಲ್ಲದೆ ಅದರ ಗೋಪುರದ ಮೇಲೆ ಹನುಮಾನ್ ಧ್ವಜವನ್ನು ಸಿಕ್ಕಿಸಿರುವ ದೃಶ್ಯವನ್ನು ಕಣ್ಣಾರೆ ಕಂಡಿರುವುದಾಗಿ ‘ದಿ ವೈರ್’ನ ವರದಿಗಾರರು ಹೇಳಿದ್ದಾರೆ.

 ರಾಜಧಾನಿ ಶಾಲೆಯ ಬಳಿಯ ಹನುಮಾನ್ ದೇವಸ್ಥಾನ ಮತ್ತು ಶಿವವಿಹಾರದ ಬಳಿ ಇರುವ ಗೌರಿ ಶಂಕರ್ ಮಂದಿರಕ್ಕೆ ಕಲ್ಲೆಸೆದಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದ್ದು ಬಲಪಂಥೀಯ ವೆಬ್ಸೈಟ್ ಒಂದು, ಚಾಂದ್ಬಾಗ್ನಲ್ಲಿರುವ ಶಿವಮಂದಿರದ ಮೇಲೇರಿ ಮುಸ್ಲಿಮರ ಗುಂಪೊಂದು ಕಲ್ಲೆಸೆದಿದೆ ಎಂದು ವರದಿ ಮಾಡಿತ್ತು. ಆದರೆ ಇದನ್ನು ಆ ಮಂದಿರದ ಅರ್ಚಕರೇ ನಿರಾಕರಿಸಿದ್ದರು.

ಪೊಲೀಸರು ನೀಡಿರುವ ಗಾಯಗೊಂಡವರ ಪ್ರತ್ಯೇಕ ಪಟ್ಟಿಯಲ್ಲಿ ಗಾಯಾಳುಗಳನ್ನು ಧರ್ಮದ ಆಧಾರದಲ್ಲಿ ವಿಂಗಡಿಸಿಲ್ಲವಾದರೂ, ಅವರ ಹೆಸರಿನ ಆಧಾರದಲ್ಲಿ ನೋಡಿದಾಗ ಒಟ್ಟು ಗಾಯಾಳುಗಳಲ್ಲಿ ಮುಸ್ಲಿಮರ ಪ್ರಮಾಣ 55%(257), ಹಿಂದುಗಳ ಪ್ರಮಾಣ 45%(216) ಎಂದು ತಿಳಿದು ಬರುತ್ತದೆ.

 ಪೊಲೀಸರ ಅಫಿದಾವಿತ್ ನಲ್ಲಿ ಹೀಗೆ ಉಲ್ಲೇಖಿಸಲಾಗಿದೆ: ಗಲಭೆಯಲ್ಲಿ 473 ಜನ ಗಾಯಗೊಂಡಿದ್ದಾರೆ. ಈ ಕೆಳಗಿನವುಗಳನ್ನು ಗಮನಿಸಿದರೆ ಆಘಾತವಾಗುತ್ತದೆ. 1. ಸಾರ್ವಜನಿಕ ವಲಯದಲ್ಲಿ ಪ್ರಸಾರವಾಗಿರುವುದಕ್ಕೆ ವಿರುದ್ಧವಾಗಿ, ಹೆಡ್ ಕಾನ್ ಸ್ಟೇಬಲ್ ರತನ್ಲಾಲ್ ಗುಂಡೇಟಿನಿಂದ ಗಾಯಗೊಂಡು ಮೃತಪಟ್ಟಿದ್ದಾರೆ. 2. ಗುಪ್ತಚರ ವಿಭಾಗದ ಅಧಿಕಾರಿ ಅಂಕಿತ್ ಶರ್ಮರನ್ನು ಹಲವು ಬಾರಿ ಇರಿದು ಕೊಲ್ಲಲಾಗಿದ್ದು ಅವರ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿದೆ. 3. ಕಟ್ಟಡವೊಂದರ ಮೊದಲನೇ ಮಹಡಿಯಲ್ಲಿ ಓರ್ವ ವ್ಯಕ್ತಿಯನ್ನು ಸಜೀವವಾಗಿ ದಹಿಸಲಾಗಿದೆ. ಈತನಿಗೆ ಬೆಂಕಿ ಹಚ್ಚುವ ಮೊದಲು ಕ್ರೂರವಾಗಿ ಹಲ್ಲೆ ನಡೆಸಿರುವುದು ತನಿಖೆಯ ಬಳಿಕ ತಿಳಿದು ಬಂದಿದೆ. 4. ಸಿಹಿತಿಂಡಿ ಅಂಗಡಿಯ ಉದ್ಯೋಗಿಯೊಬ್ಬನನನ್ನು ದಾರುಣವಾಗಿ ಕೊಲೆ ಮಾಡಲಾಗಿದೆ.

ಅಫಿದಾವಿತ್ ವಿವರಣೆಯಲ್ಲಿ - ಪೌರತ್ವ ಕಾಯ್ದೆಯನ್ನು ವಿರೋಧಿಸಿದವರು(ಗಲಭೆಯ ಪಿತೂರಿ ನಡೆಸಿದವರು) ಮತ್ತು ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರು  ರಸ್ತೆ ತಡೆ ನಡೆಸುವುದನ್ನು ವಿರೋಧಿಸಿದವರ ಮಧ್ಯೆ ನಡೆದ ಘರ್ಷಣೆ ಹಿಂಸಾಚಾರಕ್ಕೆ ಕಾರಣ ಎಂದು ಹೇಳಲಾಗಿದೆ. ಆದರೆ ಪೊಲೀಸರೇ ಸಲ್ಲಿಸಿರುವ ಹಲವು ಆರೋಪಪಟ್ಟಿಗಳಲ್ಲಿ , ದಿಲ್ಲಿ ಹಿಂಸಾಚಾರ ಪೌರತ್ವ ಕಾಯ್ದೆ ವಿರೋಧಿಗಳ (ಮುಸ್ಲಿಮರೆಂದು ಓದಿಕೊಳ್ಳಬಹುದು) ಪೂರ್ವಯೋಜಿತ ಸಂಚು ಎಂದು ಉಲ್ಲೇಖಿಸಲಾಗಿದೆ. ಆದರೆ, ಅಂಕಿಅಂಶಗಳೇ ತಿಳಿಸುವಂತೆ, ಇನ್ನೊಂದು ತಂಡದವರು ನಡೆಸಿದ ಹಿಂಸಾಚಾರ ಅಷ್ಟೊಂದು ಮಾರಕವಾಗಿ ಪರಿಣಮಿಸಿದ್ದು ಯಾಕೆ ಎಂಬ ಬಗ್ಗೆ ಯಾವುದೇ ವಿವರಣೆಯಿಲ್ಲ ಎಂದು ‘ವೈರ್’ನ ಲೇಖನದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News