ರಾಜಸ್ತಾನ: ಗೆಹ್ಲೋಟ್ ಸರಕಾರವನ್ನು ಉಳಿಸಲು ವಸುಂಧರಾ ರಾಜೇ ಸಹಾಯ !

Update: 2020-07-16 14:33 GMT

ಜೈಪುರ, ಜು 16 : ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಪಕ್ಷದ ರಾಜ್ಯಾಧ್ಯಕ್ಷ ಸಚಿನ್ ಪೈಲಟ್ ಅವರೇ ಶ್ರಮಿಸುತ್ತಿರುವಾಗ ವಿಪಕ್ಷ  ಬಿಜೆಪಿಯ ಮಿತ್ರಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ ನಾಯಕ ಹನುಮಾನ್ ಬೇನಿವಾಲ್ ಬಿಜೆಪಿ ನಾಯಕಿ, ಮಾಜಿ ಮುಖ್ಯಮಂತ್ರಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಅವರ ಪ್ರಕಾರ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರಕಾರವನ್ನು ಉಳಿಸಲು ಸ್ವತಃ ವಸುಂಧರಾ ರಾಜೇ ಶ್ರಮಿಸುತ್ತಿದ್ದಾರೆ !. 

ತನಗೆ ಆಪ್ತ ಕಾಂಗ್ರೆಸ್ ಶಾಸಕರಲ್ಲಿ "ನೀವು ಗೆಹ್ಲೋಟ್ ಸರಕಾರವನ್ನು ಬೆಂಬಲಿಸಿ. ಸಚಿನ್ ಪೈಲಟ್ ರಿಂದ ದೂರವಿರಿ " ಎಂದು ವಸುಂಧರಾ ಹೇಳಿದ್ದಾರೆ. ಇದಕ್ಕೆ ನಮ್ಮ ಬಳಿ ಬಲವಾದ ಸಾಕ್ಷ್ಯವಿದೆ  ಎಂದು ಹನುಮಾನ್ ಬೇನಿವಾಲ್  ಸರಣಿ ಟ್ವೀಟ್ ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಗೆಹ್ಲೋಟ್ ಹಾಗು ವಸುಂಧರಾ ನಡುವೆ ಒಳಒಪ್ಪಂದ ಇದೆ ಎಂದು ಈಗ ಇಡೀ ದೇಶಕ್ಕೆ ಗೊತ್ತಾಗಿದೆ ಎಂದೂ ಅವರು ಹೇಳಿದ್ದಾರೆ. ಸಚಿನ್ ಪೈಲಟ್ ಗೆ ಕಡಿಮೆಯಾಗುತ್ತಿರುವ ಶಾಸಕರ ಬೆಂಬಲಕ್ಕೆ  ಈಗ ಈ ಆರೋಪ ಹೊಸ ಬಣ್ಣ ನೀಡುವ ಸಾಧ್ಯತೆ ಇದೆ.  

ಈ ಆರೋಪದ ಬಗ್ಗೆ ವಸುಂಧರಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಸಚಿನ್ ಬಿಜೆಪಿ ಸೇರುವುದಕ್ಕೆ ವಸುಂಧರಾ ಒಪ್ಪಲಾರರು ಎಂದೇ ಕಳೆದೊಂದು ವಾರದಿಂದ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಸಾಲದ್ದಕ್ಕೆ ರಾಜಸ್ಥಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಸುಂಧರಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.  

ವಿಪಕ್ಷ ನಾಯಕ ಬಿಜೆಪಿಯ ಗುಲಾಬ್ ಚಂದ್ ಕಟಾರಿಯಾ ಮಾತ್ರ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ವಸುಂಧರಾ ಅತ್ಯಂತ ಹಿರಿಯ ನಾಯಕಿ, ಅವರು ಹಾಗೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News