ದ.ಕ. ಜಿಲ್ಲಾದ್ಯಂತ ಭಾರೀ ಮಳೆ

Update: 2020-07-16 14:34 GMT

ಮಂಗಳೂರು, ಜು.16: ದ.ಕ.ಜಿಲ್ಲಾದ್ಯಂತ ಗುರುವಾರ ಭಾರೀ ಮಳೆಯಾಗಿದೆ. ಮುಂಗಾರು ಮಳೆ ಬಿರುಸುಗೊಳ್ಳಲಿದೆ ಎಂದು ಹವಾಮಾನ ಇಲಾಖೆಯು ಮೊನ್ನೆಯೇ ಮುನ್ಸೂಚನೆ ನೀಡಿದ್ದು, ಅದರಂತೆ ಗುರುವಾರ ಮುಂಜಾನೆಯಿಂದಲೇ ಭಾರೀ ಮಳೆಯಾಗಿದೆ. ಮಧ್ಯಾಹ್ನದ ವೇಳೆ ಸ್ವಲ್ಪ ಬಿಡುವು ಪಡೆದ ಮಳೆಯು ಸಂಜೆಯ ವೇಳೆ ಬಿರುಸುಪಡೆದುಕೊಂಡಿತು. ಜಿಲ್ಲೆಯ ಪ್ರಮುಖ ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ದಿನವಿಡೀ ಉತ್ತಮ ಮಳೆಯಾಗಿದೆ. ಪಶ್ಚಿಮ ಘಟ್ಟಪ್ರದೇಶ ಮತ್ತು ತಪ್ಪಲಿನಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಜೊತೆಗೆ ಕರಾವಳಿ ತೀರದಲ್ಲಿ ಬಿರುಗಾಳಿ ಬೀಸಿದೆ. ಅದರ ಪರಿಣಾಮ ಜಿಲ್ಲೆಯ ಎಲ್ಲ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.

ಅಲ್ಲದೆ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ, ಕಬಕ, ಮುಲ್ಕಿ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರು ನಗರ ಮತ್ತು ಆಸುಪಾಸಿನ ಪಟ್ಟಣ ಪ್ರದೇಶದಲ್ಲೂ ಅಟ್ಟಹಾಸ ಮೆರೆದಿದೆ. ದ.ಕ. ಜಿಲ್ಲೆಯಲ್ಲಿ "ಯೆಲ್ಲೋ ಅಲರ್ಟ್" ಮುಂದುವರಿದಿದ್ದು, ಇನ್ನೂ ಕೆಲವು ದಿನ ಮಳೆ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಯಿಂದ ಈವರೆಗೆ ಯಾವುದೇ ಹಾನಿಯಾಗಿಲ್ಲ. ಪೂರ್ವಾಹ್ನದ ಬಳಿಕ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಯಲ್ಲಿರುವ ಕಾರಣ ಜನರ ಮತ್ತು ವಾಹನಗಳ ಓಡಾಟ ವಿರಳವಾಗಿತ್ತು. ಹಾಗಾಗಿ ಧಾರಾಕಾರ ಮಳೆಯ ಆರ್ಭಟವನ್ನು ಮನೆಯಲ್ಲಿದ್ದುಕೊಂಡೇ ಅನುಭವಿಸಿದರು. ಉಳ್ಳಾಲ ಮತ್ತಿತರ ಕಡೆ ಕಡಲ ಕೂಗು ಎಂದಿಗಿಂತ ಗುರುವಾರ ಅಧಿಕವಾಗಿತ್ತು. ನೇತ್ರಾವತಿ‌ ನದಿ ನೀರಿನ ಮಟ್ಟವು ಹೆಚ್ಚಿದೆ. 

ಮಳೆ ವಿವರ: ಗುರುವಾರ ಬೆಳಗ್ಗಿನಿಂದ ಸಂಜೆಯವರೆಗೆ ಸುಳ್ಯದ ಮರ್ಕಂಜದಲ್ಲಿ ಗರಿಷ್ಠ 75.5, ಉಬರಡ್ಕ ಮಿತ್ತೂರಿನಲ್ಲಿ 73, ಇರುವೈಲಿನಲ್ಲಿ 70 ಮಿ.ಮೀ. ಮಳೆ ಸುರಿದಿದೆ. ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬಂಟ್ವಾಳ 69.5, ಬೆಳ್ತಂಗಡಿ 53.1, ಮಂಗಳೂರು 57.4, ಪುತ್ತೂರು 57.7, ಸುಳ್ಯ 43.1 ಮಿ.ಮೀ. ಸೇರಿದಂತೆ ಸರಾಸರಿ 56.2 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News