ಉಡುಪಿ ಜಿಲ್ಲೆಯಲ್ಲಿ ಮತ್ತೆ ಹೆಚ್ಚಿದ ಕೊರೋನ ಪ್ರಕರಣ: ಗುರುವಾರ 109 ಮಂದಿಗೆ ಸೋಂಕು ದೃಢ

Update: 2020-07-16 15:46 GMT

ಉಡುಪಿ, ಜು.16: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಳ್ಳುವವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡುಬರತೊಡಗಿದ್ದು, ಗುರುವಾರ ಒಟ್ಟು 109 ಮಂದಿ ಕೋವಿಡ್ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ. ಉಳಿದಂತೆ 489 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಕೊರೋನ ಸೋಂಕು ಪತ್ತೆಯಾದ 109 ಮಂದಿಯಲ್ಲಿ ಉಡುಪಿ ತಾಲೂಕಿನ 36 ಮಂದಿ, ಕುಂದಾಪುರ ತಾಲೂಕಿನ 62 ಮಂದಿ ಹಾಗೂ ಕಾರ್ಕಳ ತಾಲೂಕಿನ 11 ಮಂದಿ ಸೇರಿದ್ದಾರೆ. 61 ಪುರುಷರು, 40 ಮಂದಿ ಮಹಿಳೆಯರು ಹಾಗೂ 10 ವರ್ಷದೊಳಗಿನ ಪ್ರಾಯದ ಆರು ಮಂದಿ ಬಾಲಕರು ಹಾಗೂ ಇಬ್ಬರು ಬಾಲಕಿಯರು ಸೇರಿದಂತೆ ಒಟ್ಟು ಎಂಟು ಮಂದಿ ಮಕ್ಕಳು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದ ಡಿಎಚ್‌ಓ, ಇಂದಿನ 109 ಪಾಸಿಟಿವ್ ಪ್ರಕರಣ ಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 1895ಕ್ಕೇರಿದೆ.

ಇಂದು ಪಾಸಿಟಿವ್ ಬಂದವರಲ್ಲಿ 11 ಮಂದಿ ಮುಂಬೈಯಿಂದ, 15 ಮಂದಿ ಬೆಂಗಳೂರಿನಿಂದ, ತಲಾ ಒಬ್ಬರು ದುಬೈ, ಹೈದರಾಬಾದ್‌ನಿಂದ, ಇಬ್ಬರು ದಾವಣಗೆರೆಯಿಂದ ಬಂದವರಾದರೆ, 17 ಮಂದಿ ಶೀತಜ್ವರದಿಂದ, ಇಬ್ಬರು ಉಸಿರಾಟದ ತೊಂದರೆಯಿಂದ ನರಳುತ್ತಿದ್ದರು. ಉಳಿದ 49 ಮಂದಿ ಜಿಲ್ಲೆಯಲ್ಲಿ ಈಗಾಗಲೇ ಸೋಂಕಿಗೆ ಪಾಸಿಟಿವ್ ಬಂದ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

ಇಂದಿನ ಪಾಸಿಟಿವ್‌ನೊಂದಿಗೆ ಉಡುಪಿ ಜಿಲ್ಲೆ 1895 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಐದನೇ ಸ್ಥಾನದಲ್ಲೇ ಮುಂದುವರಿದಿದೆ. ಬೆಂಗಳೂರು ನಗರ 25,288 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ 2,758 ಕೇಸುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಲಬುರಗಿ 2503 ಕೇಸುಗಳೊಂದಿಗೆ ಮೂರನೇ, ಬಳ್ಳಾರಿ 2067ರೊಂದಿಗೆ ನಾಲ್ಕನೇ ಸ್ಥಾನಗಳಲ್ಲಿವೆ.
ಉಳಿದಂತೆ ಧಾರವಾಡ 1574, ಯಾದಗಿರಿ 1535, ಮೈಸೂರು 1320, ಬೀದರ್ 1191ಹಾಗೂ ವಿಜಯಪುರ 1120 ಪಾಸಿಟಿವ್ ಪ್ರಕರಣಗಳೊಂದಿಗೆ ಆರರಿಂದ 10ರವರೆಗಿನ ಸ್ಥಾನಗಳನ್ನು ಪಡೆದಿವೆ.

80 ಮಂದಿ ಗುಣಮುಖ: ಜಿಲ್ಲೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದ 80 ಮಂದಿ ಇಂದು ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಉಡುಪಿಯ ಟಿಎಂಎ ಪೈ ಆಸ್ಪತ್ರೆಯಿಂದ ಮೂವರು, ಕಾರ್ಕಳದ ಸರಕಾರಿ ಆಸ್ಪತ್ರೆಯಿಂದ ಇಬ್ಬರು, ಕುಂದಾಪುರದ ಸರಕಾರಿ ಆಸ್ಪತ್ರೆಯಿಂದ 29 ಮಂದಿ ಹಾಗೂ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ತರಬೇತಿ ಕೇಂದ್ರದಿಂದ 46 ಮಂದಿ ಬಿಡುಗಡೆಗೊಂಡವರಲ್ಲಿ ಸೇರಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 1462ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 428 ಮಂದಿ ಜಿಲ್ಲೆಯಲ್ಲಿ ಇನ್ನೂ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.

537 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಗುರುವಾರ ಇನ್ನೂ 537 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 31 ಮಂದಿ, ಕೋವಿಡ್ ಸಂಪರ್ಕಿತರು 308 ಮಂದಿ ಇದ್ದರೆ, ಉಸಿರಾಟ ತೊಂದರೆಯ ಆರು ಮಂದಿ, ಶೀತಜ್ವರದಿಂದ ಬಳಲುವ 110 ಮಂದಿ ಹಾಗೂ ದೇಶ-ವಿದೇಶಗಳ ವಿವಿಧ ಕೋವಿಡ್ ಹಾಟ್‌ಸ್ಪಾಟ್ ಗಳಿಂದ ಬಂದ 82 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 23,645ಕ್ಕೇರಿದೆ. ಇವುಗಳಲ್ಲಿ ಈವರೆಗೆ 21,156 ನೆಗೆಟಿವ್, 1895 ಪಾಸಿಟಿವ್ ಬಂದಿವೆ. ಈವರೆಗೆ ಜಿಲ್ಲೆಯಲ್ಲಿ ಐವರು ಮೃತ ಪಟ್ಟಿದ್ದಾರೆ. ಇನ್ನು ಒಟ್ಟು 594 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಇಂದು 12 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಒಬ್ಬರು ಕೋವಿಡ್ ಶಂಕಿತರು, 7 ಮಂದಿ ಉಸಿರಾಟ ತೊಂದರೆಯವರು ಹಾಗೂ 4 ಮಂದಿ ಶೀತಜ್ವರದಿಂದ ಬಳಲುವವರು ಸೇರಿದ್ದಾರೆ ಎಂದರು.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 17 ಮಂದಿ ಬಿಡುಗಡೆಗೊಂಡಿದ್ದು, 155 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 163 ಮಂದಿ ಸೇರಿದಂತೆ ಒಟ್ಟು 6804 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1929 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಐಸಿಯು ಬೆಡ್ ಭರ್ತಿ
ಕಳೆದೆರಡು ದಿನಗಳಿಂದ ತೀವ್ರ ಅಸ್ವಸ್ಥತೆಯಲ್ಲಿರುವ ಕೋವಿಡ್ ಪಾಸಿಟಿವ್ ಬಂದಿರುವವರು ಪತ್ತೆಯಾಗುತ್ತಿರುವುದರಿಂದ ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿರುವ 15 ಐಸಿಯು ಕೋವಿಡ್ ಬೆಡ್‌ಗಳು ಭರ್ತಿಯಾಗಿದ್ದು, ಜಿಲ್ಲಾಡಳಿತಕ್ಕೆ ತೀವ್ರ ಸಮಸ್ಯೆ ಎದುರಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹಾಗೂ ಕುಂದಾಪುರ ಮತ್ತು ಬೈಂದೂರುಗಳಿಂದ ಗಂಭೀರ ಸ್ಥಿತಿಯ ಸೋಂಕಿತರು ಬರುತ್ತಿರುವುದರಿಂದ ಜಿಲ್ಲಾಡಳಿತ ಇಂದು ಮಣಿಪಾಲದ ಕೆಎಂಸಿ (15) ಹಾಗೂ ಉಡುಪಿಯ ಆದರ್ಶ್ (5) ಆಸ್ಪತ್ರೆಯಲ್ಲಿ ಒಟ್ಟು 20 ಐಸಿಯು ಬೆಡ್‌ಗಳನ್ನು ವ್ಯವಸ್ಥೆಗೊಳಿಸಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಅಲ್ಲದೇ ಮಣಿಪಾಲ ಕೆಎಂಸಿಯಿಂದ ಕೋವಿಡ್ ಪಾಸಿಟಿವ್ ಬಂದವರ ಚಿಕಿತ್ಸೆಗಾಗಿಯೇ ಮೀಸಲಾಗಿರುವ 200 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಇಂದು ಕಾರ್ಯಾರಂಭಿಸಿದೆ ಎಂದೂ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News