ಭಾರೀ ಮಳೆಗೆ 2 ಕಟ್ಟಡಗಳು ಕುಸಿತ: ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

Update: 2020-07-16 17:01 GMT

ಮುಂಬೈ, ಜು.16: ಮುಂಬೈಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಮಲಾಡ್ ಮಲ್ವಾನಿ ಮತ್ತು ಬಂದರು ಪ್ರದೇಶಗಳಲ್ಲಿ ಎರಡು ಕಟ್ಟಡಗಳು ಕುಸಿದಿವೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂಬೈಯ ಬಂದರು ಪ್ರದೇಶದ ಲಕೀ ಹೌಸ್ ಬಳಿ ಇರುವ ಭಾನುಶಾಲಿ ಎಂಬ ಐದು ಅಂತಸ್ತಿನ ವಸತಿ ಸಂಕೀರ್ಣದ ಒಂದು ಪಾರ್ಶ್ವ ಗುರುವಾರ ನೆಲಸಮವಾಗಿದ್ದು, ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆಯಿದೆ. ಕಟ್ಟಡದ ಇನ್ನೊಂದು ಪಾರ್ಶ್ವ ಕುಸಿದಿಲ್ಲವಾದರೂ, ಕಟ್ಟಡದ ಮೆಟ್ಟಿಲುಗಳ ಮೇಲೆ ಮಣ್ಣು ಬಿದ್ದು ಮುಚ್ಚಲ್ಪಟ್ಟಿರುವ ಕಾರಣ ಈ ಭಾಗದಲ್ಲೂ ಹಲವರು ಸಿಕ್ಕಿಬಿದ್ದಿದ್ದಾರೆ. ಇಲ್ಲಿ ಸಿಕ್ಕಿ ಬಿದ್ದಿರುವರನ್ನು ಏಣಿ ಬಳಸಿ ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ .

ಅಗ್ನಿಶಾಮಕ ದಳದ 8 ವಾಹನ, ಎರಡು ರಕ್ಷಣಾ ವಾಹನ ಹಾಗೂ ಆ್ಯಂಬುಲೆನ್ಸ್ ಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಬೃಹನ್ಮುಂಬಯಿ ನಗರಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ಇದಕ್ಕೂ ಮುನ್ನ, ಮುಂಬೈಯ ಮಲ್ವಾನಿ ಪ್ರದೇಶದಲ್ಲಿರುವ ವಸತಿ ಕಟ್ಟಡವೊಂದರ ಪಾರ್ಶ್ವಭಾಗ ಕುಸಿದುಬಿದ್ದಿದ್ದು ಕಟ್ಟಡದ ಅವಶೇಷಗಳಡಿ ಐದರಿಂದ ಆರು ಜನ ಸಿಲುಕಿದ್ದು ಇವರಲ್ಲಿ ನಾಲ್ಕು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳದ 4 ವಾಹನಗಳು, ಒಂದು ರಕ್ಷಣಾ ವಾಹನ ಹಾಗೂ ಆ್ಯಂಬುಲೆನ್ಸ್ ಅನ್ನು ಸ್ಥಳಕ್ಕೆ ರವಾನಿಸಲಾಗಿದೆ. ವೆಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿ ಸಹಿತ ನಗರದ ಪ್ರಮುಖ ರಸ್ತೆ ಹಾಗೂ ಪ್ರದೇಶಗಳಲ್ಲಿ ಮಳೆ ನೀರು ತುಂಬಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ. ಜುಲೈ ತಿಂಗಳಿನಲ್ಲಿ ಮುಂಬೈಯಲ್ಲಿ ಭಾರೀ ಮಳೆಯಾಗಿದ್ದು ಜುಲೈ 16ರವರೆಗೆ 1,024 ಎಂಎಂ ಮಳೆ ಸುರಿದಿದ್ದು, ಇದು ಜುಲೈ ತಿಂಗಳ ಸರಾಸರಿ ಮಳೆಗಿಂತ 122% ಅಧಿಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News