ಹಿಂದೆ ಸರಿಯುವಿಕೆ ಜಟಿಲ ಪ್ರಕ್ರಿಯೆ, ನಿರಂತರ ಪರಿಶೀಲನೆಯ ಅಗತ್ಯ ಇದೆ: ಭಾರತೀಯ ಸೇನೆ

Update: 2020-07-16 15:22 GMT

ಹೊಸದಿಲ್ಲಿ, ಜು. 16: ಪೂರ್ವ ಲಡಾಕ್ ನಲ್ಲಿ ಸೇನೆ ಸಂಪೂರ್ಣವಾಗಿ ಹಿಂದೆ ಸರಿಯುವ ಪ್ರಕ್ರಿಯ ಜಟಿಲ ಹಾಗೂ ನಿರಂತರ ಪರಿಶೀಲನೆಯನ್ನು ಬಯಸುತ್ತದೆ ಎಂದು ಭಾರತೀಯ ಸೇನೆ ಹೇಳಿದೆ.

ಭಾರತ ಹಾಗೂ ಚೀನಾ ನಡುವೆ ನಾಲ್ಕನೆ ಸುತ್ತಿನ ಮಾತುಕತೆ ನಡೆದ ಬಳಿಕ ಭಾರತೀಯ ಸೇನೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಹಿಂದೆ ಸರಿಯುವ ಮೊದಲ ಹಂತದ ಅನುಷ್ಠಾನದ ಪ್ರಗತಿಯನ್ನು ಭಾರತ ಹಾಗೂ ಚೀನಾ ಸೇನೆಯ ಹಿರಿಯ ಕಮಾಂಡರ್ ಗಳು ಪರಿಶೀಲನೆ ನಡೆಸಬೇಕು. ಅಲ್ಲದೆ, ಈ ವಲಯದಿಂದ ಸೇನೆಯನ್ನು ಸಂಪೂರ್ಣವಾಗಿ ಹಿಂದೆ ತೆಗೆಯುವ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಬೇಕು ಎಂದು ಭಾರತೀಯ ಸೇನೆ ಹೇಳಿದೆ.

ವಾಸ್ತವ ಗಡಿ ನಿಯಂತ್ರಣ ರೇಖೆಯ ಭಾರತೀಯ ಭಾಗದ ಚುಸುಲ್ನಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಬುಧವಾರ ಬೆಳಗ್ಗೆ 2 ಗಂಟೆ ವರೆಗೆ ಕಮಾಂಡರ್ ಗಳು 16 ಗಂಟೆಗಳ ಕಾಲ ನಿರಂತರ ಮಾತುಕತೆ ನಡೆಸಿದರು. ಈ ಸಂದರ್ಭ ಜಟಿಲವಾದ ಸೇನೆ ಹಿಂದೆ ಸರಿಯುವಿಕೆಯ ಕುರಿತ ಕ್ರಮಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಿದರು. ಸಂಪೂರ್ಣ ಹಿಂದೆ ಸರಿಯುವಿಕೆಗೆ ಉಭಯ ಸೇನೆಗಳು ಬದ್ಧವಾಗಿರಬೇಕು. ಈ ಪ್ರಕ್ರಿಯೆ ಜಟಿಲ. ಆದುದರಿಂದ ನಿರಂತರ ಪರಿಶೀಲನೆ ನಡೆಸಬೇಕು. ರಾಜತಾಂತ್ರಿಕ ಹಾಗೂ ಸೇನೆಯ ಮಟ್ಟದಲ್ಲಿ ನಿರಂತರ ಮಾತುಕತೆ ನಡೆಸುವ ಮೂಲಕ ಇದನ್ನು ಮುಂದುವರಿಸಬೇಕು ಎಂದು ಭಾರತೀಯ ಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News