‘ವಂದೇ ಭಾರತ್’ ಯೋಜನೆಯಲ್ಲಿ 6.87 ಲಕ್ಷಕ್ಕೂ ಅಧಿಕ ಭಾರತೀಯರು ದೇಶಕ್ಕೆ ವಾಪಸ್

Update: 2020-07-16 16:01 GMT
ಫೈಲ್ ಚಿತ್ರ

ಹೊಸದಿಲ್ಲಿ, ಜು. 16: ಕೊರೋನ ಪಿಡುಗಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮೇ 7ರಂದು ‘ವಂದೇ ಭಾರತ್’ ಸ್ಥಳಾಂತರ ಯೋಜನೆ ಆರಂಭಿಸಿದ ಬಳಿಕ ವಿದೇಶಗಳಿಂದ 6.87 ಲಕ್ಷಕ್ಕೂ ಅಧಿಕ ಭಾರತೀಯರು ಭಾರತಕ್ಕೆ ಹಿಂದಿರುಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.

ಕಾರ್ಯರೂಪದಲ್ಲಿರುವ ‘ವಂದೇ ಭಾರತ್’ ಯೋಜನೆಯ ನಾಲ್ಕನೇ ಹಂತದಲ್ಲಿ ಜುಲೈ 15ರಿಂದ 31ರ ನಡುವೆ ಸುಮಾರು 120 ವಿಮಾನಗಳನ್ನು ಸೇರಿಸುವುದರೊಂದಿಗೆ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ ತಿಳಿಸಿದ್ದಾರೆ. ಈ ಹೆಚ್ಚುವರಿ ವಿಮಾನಗಳು ಗಲ್ಫ್ ಕೋ-ಆಪರೇಷನ್ ಕೌನ್ಸಿಲ್ (ಜಿಸಿಸಿ) ದೇಶಗಳು, ಮಲೇಶ್ಯಾ, ಸಿಂಗಾಪುರ, ಇಂಗ್ಲೆಂಡ್, ಯುರೋಪ್, ಕಿರ್ಗಿಸ್ಥಾನ್ ಹಾಗೂ ಉಕ್ರೈನ್ನಿಂದ ವಾಪಸಾಗಲು ಬಯಸುವವರ ಬೇಡಿಕೆಯನ್ನು ಪೂರೈಸುತ್ತದೆ ಎಂದು ಶ್ರೀವಾತ್ಸವ ಹೇಳಿದ್ದಾರೆ.

ಈ ಹಂತದಲ್ಲಿ ಭಾರತದ 34 ವಿಮಾನ ನಿಲ್ದಾಣಗಳು ಈಗ 751 ಅಂತಾರಾಷ್ಟ್ರೀಯ ವಿಮಾನಗಳನ್ನು ಹೊಂದಿದಂತಾಗಿವೆ ಎಂದು ಅವರು ತಿಳಿಸಿದರು. ವಿವಿಧ ರಾಜ್ಯಗಳಿಗೆ ಹಾರಾಟ ನಡೆಸುವ ಆಹಾರ ಸರಬರಾಜು ವಿಮಾನಗಳನ್ನು ಇದರೊಂದಿಗೆ ಸೇರಿಸಿದರೆ, ನಾಲ್ಕನೆ ಹಂತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಿಮಾನಗಳ ಒಟ್ಟು ಸಂಖ್ಯೆ 926 ಆಗುತ್ತದೆ. ಈ ವಿಮಾನಗಳಲ್ಲಿ ಭಾರತೀಯ ಖಾಸಗಿ ವಿಮಾನ ಸಂಸ್ಥೆಗಳಾದ ಇಂಡಿಗೊ, ಗೋ ಏರ್ ಹಾಗೂ ಸ್ಪೈಸ್ ಜೆಟ್ ನ ಸುಮಾರು 180 ವಿಮಾನಗಳು ಸೇರಿವೆ ಎಂದು ಶ್ರೀವಾತ್ಸವ ಹೇಳಿದ್ದಾರೆ. ಭಾರತ ಹಾಗೂ ಅಮೆರಿಕ, ಜರ್ಮನಿ, ಫ್ರಾನ್, ಯುಎಇ ಉಭಯ ರಾಷ್ಟ್ರಗಳ ನಡುವೆ ವಿಮಾನಗಳ ಹಾರಾಟ ಆರಂಭಿಸಲಾಗುವುದು ಎಂದು ನಾಗರಿಕ ವಿಮಾನ ಯಾನ ಗುರುವಾರ ಘೋಷಿಸಿದೆ ಎಂದು ಶ್ರೀವಾತ್ಸವ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News